


ಡೈಲಿವಾರ್ತೆ:22/ಆಗಸ್ಟ್ /2026

ಕಂಡ್ಲೂರು ಜಾಮಿಯಾ ಮಸೀದಿಗೆ 11 ಸದಸ್ಯರ ನೂತನ ಆಡಳಿತ ಸಮಿತಿ ರಚನೆ

ಕಂಡ್ಲೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರು ಜಾಮಿಯಾ ಮಸೀದಿಯ ಆಡಳಿತ ನಿರ್ವಹಣೆಗಾಗಿ 11 ಸದಸ್ಯರನ್ನು ಒಳಗೊಂಡ ನೂತನ ಆಡಳಿತ ಸಮಿತಿಯನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು 2026ರ ಆಗಸ್ಟ್ 14ರಂದು ಹೊರಡಿಸಿರುವ ಆದೇಶ ಸಂಖ್ಯೆ KSBА/CMC/07/UDP/2026-27ರಂತೆ, ಯುಎಂಇಇಡಿ ಕಾಯ್ದೆ-1995ರ ಸೆಕ್ಷನ್ 32(2)(g) ಅಡಿಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಅವಧಿ 2026 ರಿಂದ 2029 ರ ವರೆಗೆ ಮೂರು ವರ್ಷಗಳಾಗಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉಡುಪಿ ವಕ್ಫ್ ಆಫೀಸರ್ ನಾಝಿಯ ಮೇಡಂ ಆಗಸ್ಟ್ 21ರಂದು ನೂತನ ಸಮಿತಿಯ ಪಟ್ಟಿಯನ್ನು ಹಸ್ತಾಂತರಿಸಿದರು.
ನೂತನ ಸಮಿತಿಯಲ್ಲಿ ಮುಕ್ತೇಸರ್ ಸುಹೈಲ್ ಅಧ್ಯಕ್ಷರಾಗಿ, ಶೇಖ್ ಮೊಹಮ್ಮದ್ ರಿಜ್ವಾನ್ ನದ್ವಿ ಉಪಾಧ್ಯಕ್ಷರಾಗಿ, ಕಾಸಿಂ ಮೊಹಮ್ಮದ್ ಫಝಲ್ ಕಾರ್ಯದರ್ಶಿಯಾಗಿ ಹಾಗೂ ಜಿ. ಮೊಹಮ್ಮದ್ ಸಾಹೇಬ್ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ.
ಇನ್ನುಳಿದಂತೆ ಶಹೀದ್ ಕಂಡ್ಲೂರ್ , ಖಲೀಫಾ ಮೊಹಮ್ಮದ್ ಮೊಹ್ಸಿನ್, ಲಿಯಾಕತ್ ಬೆಟ್ಟೆ, ಮೊಹಮ್ಮದ್ ಅಶ್ರಫ್, ಎಸ್. ಅನ್ವರ್, ಖಲೀಫಾ ಅಬ್ದುಲ್ ಮುನಾಫ್ ಹಾಗೂ ಮುಜಫ್ಫರ್ ಅಹ್ಮದ್ ಮುಕ್ತೇಸರ್ ಅವರು ಸದಸ್ಯರಾಗಿ ನೇಮಕಗೊಂಡಿದ್ದಾರೆ.
ದಾಖಲೆಗಳ ಪ್ರಕಾರ, ಕಂಡ್ಲೂರು ಜಾಮಿಯಾ ಮಸೀದಿ 1966ರ ಆಗಸ್ಟ್ 8ರಂದು ಹೊರಡಿಸಲಾದ ಗಜೆಟ್ ಅಧಿಸೂಚನೆಯ ಮೂಲಕ ವಕ್ಫ್ ಸಂಸ್ಥೆಯಾಗಿ ನೋಂದಾಯಿತವಾಗಿದೆ. ಮಸೀದಿಯ ಆಡಳಿತಕ್ಕಾಗಿ ಸ್ಕೀಮ್ ಆಫ್ ಅಡ್ಮಿನಿಸ್ಟ್ರೇಷನ್ (ಫಾರ್ಮ್-42) ಅನ್ನು 2025ರ ಅಕ್ಟೋಬರ್ 16ರಂದು ಮಂಡಳಿ ಅನುಮೋದಿಸಿತ್ತು.
ಈ ಹಿನ್ನೆಲೆಯಲ್ಲಿ ಮಂಡಳಿಯು 2025ರ ಡಿಸೆಂಬರ್ 24ರಂದು ಎಚ್. ಮೀರಾ ಸಾಹೇಬ್ ಅವರನ್ನು ಎನ್‌ರೋಲ್‌ಮೆಂಟ್ ಮತ್ತು ಚುನಾವಣಾಧಿಕಾರಿಯಾಗಿ ನೇಮಕ ಮಾಡಿತ್ತು. ಚುನಾವಣಾಧಿಕಾರಿ 2026ರ ಜನವರಿ 9ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿ, ಮೇ 15ರಂದು ಚುನಾವಣೆ ನಡೆಸಿದ್ದರು. ಒಟ್ಟು 18 ಮಂದಿ ಸ್ಪರ್ಧಿಸಿದ್ದ ಚುನಾವಣೆಯಲ್ಲಿ 11 ಮಂದಿ ಆಯ್ಕೆಯಾಗಿದ್ದರು.
ನಂತರ 2026ರ ಏಪ್ರಿಲ್ 8ರಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ, ಉಡುಪಿ ಸಭೆ ನಡೆಸಿ, ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಆಡಳಿತ ಸಮಿತಿಯ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಜಿಲ್ಲಾ ವಕ್ಫ್ ಅಧಿಕಾರಿ 2026ರ ಮೇ 15ರಂದು ಚುನಾವಣಾ ಪ್ರಕ್ರಿಯೆಯ ದಾಖಲೆಗಳನ್ನು ಮಂಡಳಿಗೆ ಸಲ್ಲಿಸಿ 11 ಸದಸ್ಯರ ಆಡಳಿತ ಸಮಿತಿ ರಚನೆಗೆ ಶಿಫಾರಸು ಮಾಡಿದರು.
ಮಂಡಳಿಯ ಆದೇಶದಂತೆ ನೂತನ ಆಡಳಿತ ಸಮಿತಿಯು ವಕ್ಫ್ ಕಾಯ್ದೆ, ಯುಎಂಇಇಡಿ ಕಾಯ್ದೆ ಹಾಗೂ ಕರ್ನಾಟಕ ವಕ್ಫ್ ನಿಯಮಗಳು 2017ರ ಅನ್ವಯ ಕಾರ್ಯನಿರ್ವಹಿಸಬೇಕು. ಸಂಸ್ಥೆಯ ಪ್ರಗತಿ ಮತ್ತು ಲೆಕ್ಕಪತ್ರಗಳ ವರದಿ ಸಲ್ಲಿಸುವುದು, ಬ್ಯಾಂಕ್ ಖಾತೆ ಹಾಗೂ ಸಹಿದಾರರ ವಿವರ ನೀಡುವುದು, ವಕ್ಫ್ ಕೊಡುಗೆ ಪಾವತಿಸುವುದು, ಆಡಿಟ್ ವರದಿ ಸಲ್ಲಿಸುವುದು, ವಕ್ಫ್ ಆಸ್ತಿಗಳ ವಿವರಗಳನ್ನು ದಾಖಲಿಸುವುದು ಹಾಗೂ ಬಾಡಿಗೆ/ಲೀಸ್ ಸಂಬಂಧಿತ ಮಾಹಿತಿಯನ್ನು ಸಲ್ಲಿಸುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಸಮಿತಿಗೆ ವಹಿಸಲಾಗಿದೆ. ಅಲ್ಲದೆ, ಸಂಸ್ಥೆಯ ಬಜೆಟ್ ಅನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುವುದು ಸೇರಿದಂತೆ ಮಂಡಳಿ ವಿಧಿಸಿರುವ ಎಲ್ಲ ನಿಯಮ ಮತ್ತು ಷರತ್ತುಗಳನ್ನು ಪಾಲಿಸುವಂತೆ ನೂತನ ಸಮಿತಿಗೆ ನಿರ್ದೇಶನ ನೀಡಲಾಗಿದೆ.