ಡೈಲಿವಾರ್ತೆ:30/ಆಗಸ್ಟ್ /2026

ಮುಸ್ಲಿಮರಿಲ್ಲದ ಭಾರತ ಬಯಸುವವನು ಹಿಂದೂ ಆಗಲಾರ: ಮೋಹನ್ ಭಾಗವತ್

ನ್ಯೂಯಾರ್ಕ್, ಆ.30: ಭಾರತದಲ್ಲಿ ವಿವಿಧ ಧರ್ಮಗಳು, ನಂಬಿಕೆಗಳು ಮತ್ತು ಜೀವನ ಪದ್ಧತಿಗಳನ್ನು ಗೌರವಿಸುವುದೇ ದೇಶದ ನಿಜವಾದ ಶಕ್ತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.

ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯು ಮುಸ್ಲಿಮರನ್ನು ಭಾರತದಿಂದ ಹೊರಗಿಡುವುದನ್ನು ಸೂಚಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಶನಿವಾರ ನಡೆದ ‘ಒನ್ ವರ್ಲ್ಡ್, ಒನ್ ಹ್ಯೂಮ್ಯಾನಿಟಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈವಿಧ್ಯತೆಯ ನಡುವೆಯೂ ಮಾನವೀಯ ಏಕತೆಯನ್ನು ಉಳಿಸಿಕೊಂಡು ಸಾಗುವುದೇ ಭಾರತದ ಸಾಂಪ್ರದಾಯಿಕ ಚಿಂತನೆ ಮತ್ತು ಜೀವನ ದೃಷ್ಟಿಕೋನವಾಗಿದೆ ಎಂದು ಹೇಳಿದರು.

2018ರಲ್ಲಿ ಕೆಲವು ಮುಸ್ಲಿಂ ಸಮುದಾಯದ ಸದಸ್ಯರು ತಮ್ಮನ್ನು ಭೇಟಿಯಾಗಿ, ಆರ್‌ಎಸ್‌ಎಸ್ ಪ್ರತಿಪಾದಿಸುವ ‘ಹಿಂದೂ ರಾಷ್ಟ್ರ’ ಎಂದರೆ ಭಾರತದಿಂದ ಮುಸ್ಲಿಮರನ್ನು ಹೊರಹಾಕುವುದೇ ಎಂದು ಪ್ರಶ್ನಿಸಿದ್ದ ಘಟನೆಯನ್ನು ಭಾಗವತ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ ಆತ ಹಿಂದೂ ಆಗಿರಲಾರ. ಹಿಂದೂ ಎಂದು ಕರೆದುಕೊಳ್ಳಬೇಕಾದರೆ, ಎಲ್ಲ ಮಾರ್ಗಗಳೂ ಅಂತಿಮವಾಗಿ ಒಂದೇ ದೈವಿಕ ಸತ್ಯದತ್ತ ಕರೆದೊಯ್ಯುತ್ತವೆ ಎಂಬುದನ್ನು ನಂಬಬೇಕು ಎಂದು ಅವರು ಹೇಳಿದರು.

ಭಾರತದ ಸಾಂಪ್ರದಾಯಿಕ ಚಿಂತನೆಯ ಪ್ರಕಾರ ಧರ್ಮಗಳು ಮತ್ತು ಮಾರ್ಗಗಳು ವಿಭಿನ್ನವಾಗಿರಬಹುದು, ಆದರೆ ಮಾನವೀಯತೆಯ ಮೂಲ ಒಂದೇ ಎಂದು ಭಾಗವತ್ ಅಭಿಪ್ರಾಯಪಟ್ಟರು.
ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಮತ್ತು ವಿಧಿವಿಧಾನಗಳಿಗೆ ತಮ್ಮದೇ ಆದ ಮಹತ್ವವಿದ್ದರೂ, ಧರ್ಮದ ಅಂತಿಮ ಉದ್ದೇಶ ಸತ್ಯದ ಅನ್ವೇಷಣೆಯಾಗಿದೆ ಎಂದು ಅವರು ತಿಳಿಸಿದರು.

ತಮ್ಮ ಮಾತನ್ನು ಉದಾಹರಣೆಯ ಮೂಲಕ ವಿವರಿಸಿದ ಅವರು ನಾನು ಬೆಳಕಿನತ್ತ ಬೆರಳು ತೋರಿಸಿದಾಗ, ಮೊದಲು ಬೆರಳನ್ನು ನೋಡಿ ನಂತರ ಬೆಳಕನ್ನು ನೋಡಬೇಕು. ಆದರೆ ಬೆರಳನ್ನೇ ನೋಡುತ್ತಾ ಕುಳಿತರೆ ಎಂದಿಗೂ ಬೆಳಕನ್ನು ಕಾಣಲು ಸಾಧ್ಯವಿಲ್ಲ ಎಂದರು.
ಇದೇ ರೀತಿ ಜನರು ವಿಭಿನ್ನ ಧಾರ್ಮಿಕ ಮಾರ್ಗಗಳನ್ನು ಅನುಸರಿಸಬಹುದಾದರೂ, ಅಂತಿಮವಾಗಿ ಎಲ್ಲ ಮಾರ್ಗಗಳೂ ಒಂದೇ ದೈವಿಕ ಸತ್ಯದತ್ತ ಕರೆದೊಯ್ಯುತ್ತವೆ ಎಂಬುದು ಭಾರತದ ಮೂಲಭೂತ ದೃಷ್ಟಿಕೋನ ಎಂದು ಹೇಳಿದರು.

ವೈವಿಧ್ಯತೆಯನ್ನು ಕಾಪಾಡುವುದು ಅಗತ್ಯ:
ಭಾರತದ ಇತಿಹಾಸವು ವಿವಿಧ ಧರ್ಮ ಮತ್ತು ನಂಬಿಕೆಗಳಿಗೆ ಸೇರಿದ ಜನರಿಗೆ ಆಶ್ರಯ ನೀಡಿದ ಪರಂಪರೆಯನ್ನು ಹೊಂದಿದೆ ಎಂದು ಭಾಗವತ್ ಹೇಳಿದರು.
ವಿದೇಶಿ ಆಕ್ರಮಣಗಳಿಂದ ಭಾರತ ಅನೇಕ ಸಂಗತಿಗಳನ್ನು ಕಳೆದುಕೊಂಡಿದ್ದರೂ, ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ನೋಡುವ ಭಾರತದ ಮೂಲ ಪರಂಪರೆ ಇನ್ನೂ ಜೀವಂತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಒಂದು ಜಗತ್ತು, ಒಂದು ಮಾನವೀಯತೆ ಎಂಬ ಸಂದೇಶವು ಕೇವಲ ತತ್ವಶಾಸ್ತ್ರವಲ್ಲ, ಸಾಮಾನ್ಯ ಜನರ ಬದುಕಿಗೂ ಅನ್ವಯವಾಗುವ ಭಾರತದ ಶಾಶ್ವತ ಸಂದೇಶವಾಗಿದೆ ಎಂದು ಅವರು ಹೇಳಿದರು.
ಆದ್ದರಿಂದ ಸಮಾಜದಲ್ಲಿರುವ ವೈವಿಧ್ಯತೆಯನ್ನು ರಕ್ಷಿಸುವುದು ಮತ್ತು ಪ್ರತಿಯೊಂದು ನಂಬಿಕೆ ಹಾಗೂ ಜೀವನ ಪದ್ಧತಿಯನ್ನು ಗೌರವಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ ಭಾಗವತ್, ವಿಭಿನ್ನತೆಯ ನಡುವೆಯೂ ಏಕತೆಯಿಂದ ಬದುಕುವುದೇ ಪ್ರಕೃತಿಯ ವಾಸ್ತವ ಮತ್ತು ಮಾನವೀಯತೆಯ ನಿಜವಾದ ಸತ್ಯವಾಗಿದೆ ಎಂದು ಹೇಳಿದರು.