ಡೈಲಿವಾರ್ತೆ:31/ಆಗಸ್ಟ್ /2026

ಮಂಗಳೂರು: ಮೊಬೈಲ್ ವಿಚಾರಕ್ಕೆ ಅಣ್ಣ-ತಮ್ಮಂದಿರ ಜಗಳ – ಕೊಲೆಯಲ್ಲಿ ಅಂತ್ಯ!

ಮಂಗಳೂರು: ಮೊಬೈಲ್ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ತಮ್ಮನ ಚಾಕು ಇರಿತಕ್ಕೆ ಅಣ್ಣನೊಬ್ಬ ಬಲಿಯಾದ ದಾರುಣ ಘಟನೆ ನಗರದ ಬಿಜೈ ಕೊಟ್ಟಾರ ಕ್ರಾಸ್ ಬಳಿ ಭಾನುವಾರ ರಾತ್ರಿ ನಡೆದಿದೆ.

ಮೃತರನ್ನು ಅಡಿವೆಪ್ಪ (40) ಎಂದು ಗುರುತಿಸಲಾಗಿದೆ. ಅವರ ತಮ್ಮ ರಾಜು (36) ಕೊಲೆ ಆರೋಪಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಉರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದವರಾದ ಅಣ್ಣ-ತಮ್ಮಂದಿರು ತಮ್ಮ ತಾಯಿಯೊಂದಿಗೆ ಕೊಟ್ಟಾರ ಕ್ರಾಸ್ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಾಯಿ ಸಣ್ಣ ಗೂಡಂಗಡಿ ನಡೆಸುತ್ತಿದ್ದು, ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇಬ್ಬರಿಗೂ ಕುಡಿತದ ಚಟವಿತ್ತು ಎನ್ನಲಾಗಿದೆ. ಭಾನುವಾರ ರಾತ್ರಿ ಸುಮಾರು 10.30ರಿಂದ 11 ಗಂಟೆಯ ಅವಧಿಯಲ್ಲಿ ಮೊಬೈಲ್ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಜಗಳ ಹಾಗೂ ಹೊಡೆದಾಟಕ್ಕೆ ತಿರುಗಿದೆ.
ಜಗಳ ತೀವ್ರಗೊಂಡ ಸಂದರ್ಭದಲ್ಲಿ ಆರೋಪಿ ರಾಜು ಚಾಕುವಿನಿಂದ ಅಡಿವೆಪ್ಪ ಅವರಿಗೆ ಇರಿದಿದ್ದಾನೆ ಎನ್ನಲಾಗಿದೆ.

ಘಟನೆಯ ಬಳಿಕ ಮನೆಗೆ ಬಂದ ತಾಯಿ, ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆತಂಕಗೊಂಡಿದ್ದಾರೆ.
ಕೂಡಲೇ ಅವರನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಅಡಿವೆಪ್ಪ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಉರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಾಜು ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.