


ಡೈಲಿವಾರ್ತೆ:31/ಆಗಸ್ಟ್ /2026

ಹಳೆಯಂಗಡಿ: ರೈಲು ಚಲಿಸುತ್ತಿದ್ದಾಗಲೇ ಹಳಿ ದಾಟಲು ಯತ್ನ – ಕಾರ್ಮಿಕ ದಾರುಣ ಸಾವು

ವರದಿ: ಅದ್ದಿ ಬೊಳ್ಳುರು
ಹಳೆಯಂಗಡಿ: ರೈಲು ಚಲಿಸುತ್ತಿದ್ದಾಗಲೇ ರೈಲ್ವೆ ಹಳಿ ದಾಟಲು ಮುಂದಾದ ಕಾರ್ಮಿಕನೊಬ್ಬ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹಳೆಯಂಗಡಿಯ ಇಂದಿರನಗರ ರೈಲ್ವೆ ಗೇಟ್ ಬಳಿ ನಡೆದಿದೆ.
ಮೃತರನ್ನು ಒಡಿಶಾ ಮೂಲದ ಜಗ (40) ಎಂದು ಗುರುತಿಸಲಾಗಿದೆ.
ಅವರು ತೋಕೂರು ಸಮೀಪದ ಫ್ಲೈವುಡ್ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಜಗ ಅವರು ಹಳೆಯಂಗಡಿ ಪೇಟೆಯಿಂದ ಇಂದಿರನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಅವರು ರೈಲ್ವೆ ಗೇಟ್ ಬಳಿ ರೈಲು ಚಲಿಸುತ್ತಿದ್ದಾಗಲೇ ಹಳಿ ದಾಟಲು ಮುಂದಾಗಿದ್ದರು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಅಪಾಯದ ಬಗ್ಗೆ ಎಚ್ಚರಿಸಿ ಜೋರಾಗಿ ಕೂಗಿದರೂ, ರೈಲು ಬರುತ್ತಿದ್ದ ಹಳಿಯ ಸಮೀಪಕ್ಕೆ ಅವರು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಅವರೊಂದಿಗೆ ಇದ್ದ ಇಬ್ಬರಲ್ಲಿ ಓರ್ವನಿಗೆ ರೈಲು ಡಿಕ್ಕಿ ಹೊಡೆದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಪರಿಣಾಮವಾಗಿ ಕೆಲಕಾಲ ರೈಲ್ವೆ ಗೇಟ್ ಸುತ್ತಮುತ್ತ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮುಲ್ಕಿ ಠಾಣೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.
ಘಟನೆ ಕುರಿತು ಮುಲ್ಕಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.