ಡೈಲಿವಾರ್ತೆ:01/ಸೆ./2026

ಕೋಟ: ಸರ್ಕಾರಿ ಅಕ್ಕಿ ಹೆಸರಿನಲ್ಲಿ ಬೆದರಿಕೆ: ಹಣದ ಬೇಡಿಕೆ ಆರೋಪ – ಜೀವ ಬೆದರಿಕೆ ಪ್ರಕರಣ ದಾಖಲು

ಕೋಟ: ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಆರೋಪ ಹೊರಿಸಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುಜರಿ ವ್ಯಾಪಾರ ಮಾಡಿಕೊಂಡಿರುವ ಸಾಸ್ತಾನದ ಜಿ. ಮೊಹಮ್ಮದ್ ಅವರು ನೀಡಿರುವ ದೂರಿನಂತೆ, ಆ.31ರಂದು ಬೆಳಗ್ಗೆ ಸುಮಾರು 11.30ಕ್ಕೆ ಎರಡನೇ ಆರೋಪಿ ಕರೆ ಮಾಡಿ ಎರಡು ಚೀಲ ಅಕ್ಕಿಯನ್ನು ಪಿರ್ಯಾದುದಾರರ ಮನೆಯ ಅಂಗಳದಲ್ಲಿ ಇರಿಸಿರುವುದಾಗಿ ತಿಳಿಸಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿದ ಮೊಹಮ್ಮದ್ ಅವರು ತಾವು ಕೂಡಲೇ ಮನೆಗೆ ಬರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ನಾಗೇಂದ್ರ ಪುತ್ರನ್ ಕರೆ ಮಾಡಿ, ಸರ್ಕಾರದ ಅಕ್ಕಿಯನ್ನು ಖರೀದಿಸಿ ಅಕ್ರಮವಾಗಿ ದಾಸ್ತಾನು ಮಾಡಿರುವ ವಿಚಾರ ತನಗೆ ತಿಳಿದಿದ್ದು, ಪಿರ್ಯಾದುದಾರರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪಿರ್ಯಾದುದಾರರು ಮನೆಗೆ ಬಂದು ಪರಿಶೀಲಿಸಿದಾಗ ಸಚಿನ್ ಆಟೋ ರಿಕ್ಷಾದಲ್ಲಿ ಸ್ಥಳಕ್ಕೆ ಬಂದಿದ್ದರೆ, ನಾಗೇಂದ್ರ ಪುತ್ರನ್ ಹಾಗೂ ಪ್ರದೀಪ್ ಅಲಿಯಾಸ್ ಎಸ್‌ಟಿಡಿ ಪ್ರದೀಪ್ ಬೈಕ್‌ನಲ್ಲಿ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ಮೊದಲ ಆರೋಪಿ ತಾನು ಸಾಮಾಜಿಕ ಕಾರ್ಯಕರ್ತನಾಗಿದ್ದು, ಸರ್ಕಾರಿ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇರಿಸಿರುವ ದೃಶ್ಯವನ್ನು ವಿಡಿಯೋ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವಿಚಾರದಲ್ಲಿ ದೂರು ದಾಖಲಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡುವುದಾಗಿ ಬೆದರಿಸಿದ ಆರೋಪಿ, ಆರಂಭದಲ್ಲಿ ₹2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಪಿರ್ಯಾದುದಾರರು ತೊಂದರೆ ನೀಡದಂತೆ ಮನವಿ ಮಾಡಿಕೊಂಡರೂ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊನೆಗೆ ₹1 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ನೀಡದಿದ್ದರೆ ಜನರನ್ನು ಸೇರಿಸಿ ತಮ್ಮ ಹುಡುಗರನ್ನು ಕರೆಸಿ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂಬುದು ಪಿರ್ಯಾದುದಾರರ ಆರೋಪವಾಗಿದೆ.

ಮೊದಲ ಆರೋಪಿ ಮಧ್ಯಾಹ್ನ ಸುಮಾರು 2.45ರವರೆಗೂ ಹಣ ನೀಡದೆ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ನಿಂತಿದ್ದಾನೆ ಎನ್ನಲಾಗಿದೆ.
ಬಳಿಕ ಪಿರ್ಯಾದುದಾರರ ಮಕ್ಕಳು ಸ್ಥಳಕ್ಕೆ ಬಂದಾಗ ಆರೋಪಿಯು ಮತ್ತೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಥಳದಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.