ಡೈಲಿವಾರ್ತೆ:04/ಸೆ./2026

ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಸುಣ್ಣಾರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ‘ಮುದ್ದು ಕೃಷ್ಣ’ ಸ್ಪರ್ಧೆಯಲ್ಲಿ ಪುಟಾಣಿಗಳ ಮನಮೋಹಕ ಪ್ರದರ್ಶನ:
ಮೊಬೈಲ್ ಬದಲು ಮಕ್ಕಳಿಗೆ ಉತ್ತಮ ಸ್ನೇಹ,ಸಂಸ್ಕಾರದ ವಾತಾವರಣ ನೀಡಿ: ದೀಪಿಕಾ ಸುಭಾಷ್ ಶೆಟ್ಟಿ

ಕುಂದಾಪುರ, ಸೆ. 4: ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಹಾಗೂ ಆನ್‌ಲೈನ್ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದು ಅವರ ನೈಜ ಸಾಮಾಜಿಕ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ. ಪೋಷಕರು ಮಕ್ಕಳ ಕೈಗೆ ಸದಾ ಮೊಬೈಲ್ ನೀಡುವ ಬದಲು, ಅವರೊಂದಿಗೆ ಸಮಯ ಕಳೆಯುವುದರ ಜತೆಗೆ ಉತ್ತಮ ಸ್ನೇಹಿತರನ್ನು ಬೆಳೆಸಿಕೊಳ್ಳಲು ಹಾಗೂ ಆರೋಗ್ಯಕರ ಸಾಮಾಜಿಕ ವಾತಾವರಣದಲ್ಲಿ ಬೆಳೆಯಲು ಅವಕಾಶ ಕಲ್ಪಿಸಬೇಕು ಎಂದು ಅತ್ರಾಡಿ ವಿಜಯ ಮಕ್ಕಳ ಕೂಟ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲೆ ಶ್ರೀಮತಿ ದೀಪಿಕಾ ಸುಭಾಷ್ ಶೆಟ್ಟಿ ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ಸುಣ್ಣಾರಿಯಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಿದ್ದ ‘ಮುದ್ದು ಕೃಷ್ಣ’ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಶ್ರೀಕೃಷ್ಣ ಕೇವಲ ಪೌರಾಣಿಕ ವ್ಯಕ್ತಿತ್ವವಲ್ಲ; ಸತ್ಯ, ಪ್ರೀತಿ, ಜ್ಞಾನ, ಧರ್ಮ ಹಾಗೂ ಭಾರತೀಯ ಸಂಸ್ಕೃತಿಯ ಆದರ್ಶ ಪ್ರತೀಕವಾಗಿದ್ದಾರೆ. ಕೃಷ್ಣನ ಬಾಲ್ಯದ ತುಂಟಾಟ, ಚಂಚಲತೆ, ಪ್ರಕೃತಿ ಹಾಗೂ ಪ್ರಾಣಿಗಳ ಮೇಲಿನ ಪ್ರೀತಿ ಮಕ್ಕಳಿಗೆ ಜೀವನದ ಅನೇಕ ಮೌಲ್ಯಗಳನ್ನು ಕಲಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀಕೃಷ್ಣ ಮತ್ತು ಸುಧಾಮರ ಸ್ನೇಹವನ್ನು ಉಲ್ಲೇಖಿಸಿದ ದೀಪಿಕಾ ಶೆಟ್ಟಿ, ಶ್ರೀಮಂತಿಕೆ-ಬಡತನದ ಭೇದವಿಲ್ಲದೆ ನಿಜವಾದ ಸ್ನೇಹವನ್ನು ಗೌರವಿಸಿದ ಕೃಷ್ಣನ ವ್ಯಕ್ತಿತ್ವ ಇಂದಿನ ಮಕ್ಕಳಿಗೆ ಆದರ್ಶವಾಗಬೇಕು ಎಂದರು.

ಮೊಬೈಲ್‌ನಿಂದ ದೂರ, ನೈಜ ಬದುಕಿನತ್ತ ಮಕ್ಕಳನ್ನು ಕೊಂಡೊಯ್ಯಬೇಕು:

ಇಂದಿನ ಮಕ್ಕಳು ಮೊಬೈಲ್ ಗೇಮ್ ಸೇರಿದಂತೆ ವಿವಿಧ ಆನ್‌ಲೈನ್ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವುದರಿಂದ ನೈಜ ಸ್ನೇಹ, ದೈಹಿಕ ಚಟುವಟಿಕೆ ಹಾಗೂ ಪರಸ್ಪರ ಸಂವಹನದ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಕಲಿಸಲಾಗುತ್ತದೆ. ಅದಕ್ಕೆ ಪೂರಕವಾಗಿ ಮನೆಯಲ್ಲಿಯೂ ಮಕ್ಕಳಿಗೆ ಸ್ವಚ್ಛತೆ, ಶಿಸ್ತು, ಸಂಸ್ಕಾರ ಹಾಗೂ ನಮ್ಮ ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆಯೋಜಿಸಲಾಗುವ ‘ಮುದ್ದು ಕೃಷ್ಣ’ ಸ್ಪರ್ಧೆಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪೋಷಕರು ಮತ್ತು ಶಿಕ್ಷಕರು ಒಟ್ಟಾಗಿ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡಿದಾಗ ಮಾತ್ರ ಅವರ ವ್ಯಕ್ತಿತ್ವವನ್ನು ಸಮಗ್ರವಾಗಿ ರೂಪಿಸಲು ಸಾಧ್ಯ ಎಂದರು.

ಬಾಲ್ಯದಲ್ಲೇ ಸಂಸ್ಕಾರ ನೀಡಿದರೆ ಉತ್ತಮ ಸಮಾಜ ನಿರ್ಮಾಣ: ಎಂ. ಮಹೇಶ್ ಹೆಗ್ಡೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಎಂ. ಹೆಗ್ಡೆ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿಯ ಅರಿವು ಮೂಡಿಸಿದರೆ ಅವರು ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ, ಮೌಲ್ಯಾಧಾರಿತ ವ್ಯಕ್ತಿಗಳಾಗಿ ಬೆಳೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳಿಗೆ ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲದೆ, ಅವರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ. ಬಾಲ್ಯದಲ್ಲಿ ಬಿತ್ತುವ ಉತ್ತಮ ಮೌಲ್ಯಗಳೇ ಮಕ್ಕಳ ಭವಿಷ್ಯದ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕೃತಿ, ಧರ್ಮ ಹಾಗೂ ಪರಂಪರೆಯ ಪರಿಚಯವನ್ನು ಮಾಡಿಕೊಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ನಮ್ಮ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವುದರೊಂದಿಗೆ ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆಯಾಗುತ್ತವೆ ಎಂದರು.

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸ್ಪರ್ಧೆಯಲ್ಲಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷಧಾರಿಗಳಾಗಿ ಭಾಗವಹಿಸಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ ಅವರು, ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆತಂದು ಪ್ರೋತ್ಸಾಹಿಸಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಸ್ಪರ್ಧೆಗಳಲ್ಲಿ ಗೆಲುವು ಅಥವಾ ಸೋಲು ಮುಖ್ಯವಲ್ಲ; ಭಾಗವಹಿಸುವುದೇ ಮಕ್ಕಳಿಗೆ ದೊಡ್ಡ ಅನುಭವವಾಗಿದೆ. ಮೊದಲ ಅಥವಾ ಎರಡನೇ ಬಹುಮಾನ ದೊರೆಯಲಿಲ್ಲ ಎಂಬ ಕಾರಣಕ್ಕೆ ಮಕ್ಕಳು ಹಾಗೂ ಪೋಷಕರು ಬೇಸರಗೊಳ್ಳಬಾರದು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬಾಲ್ಯದಲ್ಲಿಯೇ ಮಕ್ಕಳಲ್ಲಿ ಬೆಳೆಸಬೇಕು ಎಂದು ಮಹೇಶ್ ಹೆಗ್ಡೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ವಿದುಷಿ ಸುಫಲಿತಾ ಹಾಗೂ ಶ್ರೀಮತಿ ಸಾರಿಕಾ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ನಾಗರಾಜ್ ಶೆಟ್ಟಿ, ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜಿನಿ ಆಚಾರ್ಯ, ಸಿಬಿಎಸ್‌ಇ ವಿಭಾಗದ ಸಂಯೋಜಕಿ ಶ್ರೀಮತಿ ವಿಶಾಲ ಶೆಟ್ಟಿ ಉಪಸ್ಥಿತರಿದ್ದರು.

ಶಿಕ್ಷಕಿ ಉಷಾಲತಾ ಅತಿಥಿಗಳನ್ನು ಸ್ವಾಗತಿಸಿದರು. ಸುಜಾತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಲಕ್ಷ್ಮಿಕಾಂತ್ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಪುಟಾಣಿಗಳ ಆಕರ್ಷಕ ಕೃಷ್ಣ-ರಾಧೆ ವೇಷಧಾರಣೆ ಹಾಗೂ ಮುದ್ದು ಕೃಷ್ಣ ಸ್ಪರ್ಧೆ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದವು.