ಡೈಲಿವಾರ್ತೆ:03/ಸೆ./2026

ಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿನೊಳಗೆ ಅಡಗಿ ಕುಳಿತ ರೌಡಿ – ನೀರಿನ ಗುಳ್ಳೆಗಳಿಂದ ಬಯಲಾಯ್ತು ರಹಸ್ಯ!

ಶಿವಮೊಗ್ಗ: ಮಹಾಭಾರತ ಯುದ್ದದ ಕೊನೆಯಲ್ಲಿ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ ಕಥೆಯಂತೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ರೌಡಿಶೀಟರ್‌ ಒಬ್ಬ ಹಳ್ಳದ ನೀರಿನಲ್ಲಿ ಮುಳುಗಿ ಅಡಗಿ ಕುಳಿತಿದ್ದ ವಿಚಿತ್ರ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನೀರಿನೊಳಗೆ ಅಡಗಿ ಪೊಲೀಸರ ಕಣ್ತಪ್ಪಿಸಲು ಯತ್ನಿಸಿದ ಆರೋಪಿಯನ್ನು, ನೀರಿನ ಅಡಿಯಿಂದ ಮೇಲಕ್ಕೆ ಬರುತ್ತಿದ್ದ ಗುಳ್ಳೆಗಳು ಕೊನೆಗೂ ಪೊಲೀಸರ ಕೈಗೆ ಸಿಲುಕುವಂತೆ ಮಾಡಿವೆ.

ಬಂಧಿತ ಆರೋಪಿಯನ್ನು ಭದ್ರಾವತಿಯ ರೌಡಿಶೀಟರ್‌ ದಿಲೀಪ್ ಅಲಿಯಾಸ್ ಕರಿಯಾ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ವಿರುದ್ಧ ನ್ಯಾಯಾಲಯವು ಮೂರು ಬಾರಿ ವಾರಂಟ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲು ಸೆಪ್ಟೆಂಬರ್ 2ರಂದು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ಆಗಮನದ ಮಾಹಿತಿ ತಿಳಿಯುತ್ತಿದ್ದಂತೆ ದಿಲೀಪ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ನಡುವೆ ಆರೋಪಿ ಭಂಡಾರಹಳ್ಳಿಯ ಹಳ್ಳದ ಸಮೀಪ ಅಡಗಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸುತ್ತಮುತ್ತ ವ್ಯಾಪಕ ಹುಡುಕಾಟ ನಡೆಸಿದರೂ ಆರಂಭದಲ್ಲಿ ಆರೋಪಿಯ ಯಾವುದೇ ಸುಳಿವು ದೊರೆಯಲಿಲ್ಲ.
ಆದರೆ ಹಳ್ಳದ ನೀರಿನಲ್ಲಿ ಕಳೆ ಹಾಗೂ ಪೊದೆಗಳು ಅಸಹಜವಾಗಿ ಸರಿದಿರುವುದು ಪೊಲೀಸರ ಗಮನ ಸೆಳೆದಿದೆ. ಇದರಿಂದ ಅನುಮಾನಗೊಂಡ ನ್ಯೂ ಟೌನ್ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಹಳ್ಳದೊಳಗೆ ಇಳಿದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ನೀರಿನ ಅಡಿಯಿಂದ ನಿರಂತರವಾಗಿ ಗುಳ್ಳೆಗಳು ಮೇಲಕ್ಕೆ ಬರುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳವನ್ನು ಸುತ್ತುವರಿದ ಪೊಲೀಸರು ನೀರಿನೊಳಗೆ ಅಡಗಿ ಕುಳಿತಿದ್ದ ದಿಲೀಪ್ ಅಲಿಯಾಸ್ ಕರಿಯಾನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ನೀರಿನೊಳಗೆ ಅಡಗಿ ಕುಳಿತಿದ್ದ ಆರೋಪಿಗೆ ಅಲ್ಲಿಯೇ ಕೈಕೋಳ ತೊಡಿಸಿ ಬಳಿಕ ದಂಡೆಯ ಮೇಲೆ ಕರೆತರಲಾಯಿತು.

ಅಪಾಯವನ್ನು ಲೆಕ್ಕಿಸದೆ ಕಾರ್ಯಾಚರಣೆ ನಡೆಸಿ ಕುಖ್ಯಾತ ರೌಡಿಶೀಟರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾದ ನ್ಯೂ ಟೌನ್ ಠಾಣೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.