ಡೈಲಿವಾರ್ತೆ:07/ಸೆ./2026

ಯಕ್ಷ ನಕ್ಷತ್ರ ಟ್ರಸ್ಟ್ ಕಿರಾಡಿ ಉತ್ಸವದಲ್ಲಿ ಕಲಾವಿದರ ಸೇವೆ, ಸಾಧನೆಗೆ ಸನ್ಮಾನ:
ಯಕ್ಷಗಾನ ನಶಿಸುವ ಕಲೆಯಲ್ಲ: ದೇಶ-ವಿದೇಶಗಳಲ್ಲಿ ಬೆಳೆಯುತ್ತಿರುವ ಸಾಂಸ್ಕೃತಿಕ ವೈಭವ – ಡಾ. ಮೋಹನ್ ಆಳ್ವ

ಬ್ರಹ್ಮಾವರ: ಯಕ್ಷಗಾನ ನಶಿಸಿ ಹೋಗುತ್ತಿರುವ ಕಲೆ ಎಂಬ ಅಭಿಪ್ರಾಯವನ್ನು ಹಲವು ವರ್ಷಗಳಿಂದ ವ್ಯಕ್ತಪಡಿಸಲಾಗುತ್ತಿದೆ. ಆದರೆ ಕಳೆದ ಏಳು ದಶಕಗಳಿಂದ ಯಕ್ಷಗಾನವನ್ನು ಹತ್ತಿರದಿಂದ ನೋಡುತ್ತಿರುವ ನನಗೆ ಈ ಕಲೆಯ ಬೆಳವಣಿಗೆಯ ಚಿತ್ರಣವೇ ವಿಭಿನ್ನವಾಗಿ ಕಾಣುತ್ತಿದೆ. ಕಲಾವಿದರ ನಿರಂತರ ಪರಿಶ್ರಮ, ಸಮರ್ಪಣೆ ಮತ್ತು ಹೊಸ ತಲೆಮಾರಿನ ಆಸಕ್ತಿಯಿಂದ ಯಕ್ಷಗಾನ ಇಂದು ಮತ್ತಷ್ಟು ಶ್ರೀಮಂತವಾಗಿ ಬೆಳೆಯುತ್ತಿದ್ದು, ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಮೋಹನ್ ಆಳ್ವ ಹೇಳಿದರು.

ಮಂದಾರ್ತಿಯ ದುರ್ಗಾ ಸನ್ನಿಧಿ ಶೇಡಿಕೊಡ್ಲು ಸಭಾಭವನದಲ್ಲಿ ಯಕ್ಷ ನಕ್ಷತ್ರ ಟ್ರಸ್ಟ್ (ರಿ.), ಕಿರಾಡಿ ವತಿಯಿಂದ ಆಯೋಜಿಸಿದ್ದ ಕಿರಾಡಿ ಉತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಯಕ್ಷಗಾನ ಕೇವಲ ಮನರಂಜನೆಯ ಕಲೆಯಲ್ಲ ಅದು ನಮ್ಮ ಕರಾವಳಿಯ ಬದುಕು, ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಜೀವಂತ ಸಾಂಸ್ಕೃತಿಕ ಪರಂಪರೆಯಾಗಿದೆ. ಕಾಲದ ಬದಲಾವಣೆಗಳಿಗೆ ಹೊಂದಿಕೊಂಡು ಯಕ್ಷಗಾನ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಈ ಕಲೆಯನ್ನು ಉಳಿಸಿ ಬೆಳೆಸುವ ಹೊಣೆ ಕಲಾವಿದರಷ್ಟೇ ಅಲ್ಲ ಇಡೀ ಸಮಾಜದ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯಕ್ಷಗಾನದ ಆಳ ಅರಿತರೆ ಬದುಕಿನಲ್ಲಿ ತಪ್ಪುಗಳು ಕಡಿಮೆಯಾಗುತ್ತವೆ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಯಕ್ಷಗಾನವು ಅತ್ಯಂತ ಸಮೃದ್ಧ ಮತ್ತು ಮೌಲ್ಯಾಧಾರಿತ ಕಲೆಯಾಗಿದೆ. ತಾವು ಸಚಿವರಾಗಿದ್ದ ಅವಧಿಯಲ್ಲಿ ತಮ್ಮ ಇತಿಮಿತಿಯೊಳಗೆ ಯಕ್ಷಗಾನ ಕ್ಷೇತ್ರಕ್ಕೆ ಅಗತ್ಯ ಸಹಕಾರ ನೀಡಲು ಪ್ರಯತ್ನಿಸಿದ್ದೇನೆ ಎಂದರು.
ಯಕ್ಷಗಾನದ ಕಥೆಗಳು, ಪಾತ್ರಗಳು ಮತ್ತು ಬದುಕಿನ ಮೌಲ್ಯಗಳು ವ್ಯಕ್ತಿಯ ಚಿಂತನೆ ಹಾಗೂ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯನ್ನು ಹೊಂದಿವೆ. ಯಕ್ಷಗಾನದ ಆಳ ಮತ್ತು ಅದರ ಸಂದೇಶವನ್ನು ಅರ್ಥೈಸಿಕೊಂಡ ವ್ಯಕ್ತಿ ತನ್ನ ಬದುಕಿನಲ್ಲಿ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಂದು ಮನೆಯಿಂದಲೂ ಒಬ್ಬ ಯಕ್ಷಗಾನ ಕಲಾವಿದ ಹೊರಹೊಮ್ಮುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.
ಕಲಾವಿದ ಪ್ರಕಾಶ್ ಕಿರಾಡಿ ಅವರು ತಮ್ಮ ಯಕ್ಷ ನಕ್ಷತ್ರ ಟ್ರಸ್ಟ್ ಮೂಲಕ ಕಲಾವಿದರನ್ನು ಗುರುತಿಸಿ ಗೌರವಿಸುವುದರ ಜತೆಗೆ ಸಂಕಷ್ಟದಲ್ಲಿರುವ ಕಲಾವಿದರಿಗೆ ಸಹಕಾರ ನೀಡುತ್ತಿರುವುದು ಸಮಾಜಮುಖಿ ಮತ್ತು ಅನುಕರಣೀಯ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ತಾನು ಬೆಳೆಯುವುದರೊಂದಿಗೆ ಇತರ ಕಲಾವಿದರೂ ಬೆಳೆಯಬೇಕು: ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕಲಾವಿದ ಪ್ರಕಾಶ್ ಕಿರಾಡಿ ಅವರು ವೈಯಕ್ತಿಕ ಸಾಧನೆಯಲ್ಲಷ್ಟೇ ತೃಪ್ತಿಪಡದೆ, ತನ್ನೊಂದಿಗೆ ಇತರ ಕಲಾವಿದರೂ ಬೆಳೆಯಬೇಕು ಎಂಬ ವಿಶಾಲ ಮನೋಭಾವದಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾವಿದರ ಬದುಕಿಗೆ ನೆರವಾಗುವ ಮೂಲಕ ಯಕ್ಷಗಾನ ಕ್ಷೇತ್ರದ ಬೆಳವಣಿಗೆಗೆ ಅವರು ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದರು.

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಹೈದರಾಬಾದ್‌ನ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕೃಷ್ಣಪ್ರಸಾದ್ ಸಮೂಹ ಸಂಸ್ಥೆಗಳ ಮಾಲಕ ಸಂಪತ್ ಕುಮಾರ್ ಶೆಟ್ಟಿ, ಗಿಳಿಯಾರು ಜನಸೇವಾ ಟ್ರಸ್ಟ್‌ನ ವಸಂತ್ ಗಿಳಿಯಾರ್, ರವಿ ಕೊಟ್ಟಾರಗಸ್ತಿ ಹಾಗೂ ರಾಮಕೃಷ್ಣ ಮರಾಟೆ ಶುಭ ಹಾರೈಸಿ ಮಾತನಾಡಿದರು.

ಐರ್‌ಬೈಲ್ ಆನಂದ ಶೆಟ್ಟಿಗೆ ‘ಕಿರಾಡಿ ಯಕ್ಷ ನಕ್ಷತ್ರ ಪ್ರಶಸ್ತಿ’

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಐರ್‌ಬೈಲ್ ಆನಂದ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಕಿರಾಡಿ ಯಕ್ಷ ನಕ್ಷತ್ರ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಶ್ರೀಮತಿ ಸುಮತಿ ಶೆಟ್ಟಿ ಮುನಿಯಾಲು, ಲಲಿತಾ ಗಣಪತಿ ಭಟ್ ಕಣ್ಣಿಮನೆ, ಯಕ್ಷಗಾನ ಪ್ರಸಂಗಕರ್ತ ರಮೇಶ್ ಮಂಜು ಹಾಗೂ ಕಲಾವಿದರಾದ ಶಿವಾನಂದ ಕೋಟ, ರಮೇಶ್ ಭಂಡಾರಿ, ಮಹಮ್ಮದ್ ಗೌಸ್, ಮೊಳಹಳ್ಳಿ ಕೃಷ್ಣ, ಕೃಷ್ಣ ಚಕ್ರಮೈದಾನ ಮತ್ತು ಕಿರಾಡಿ ಪ್ರಕಾಶ್ ದಂಪತಿಯನ್ನು ಸನ್ಮಾನಿಸಲಾಯಿತು.

ಯಕ್ಷ ನಕ್ಷತ್ರ ಟ್ರಸ್ಟ್ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಮನೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯಧನವನ್ನೂ ನೀಡಲಾಯಿತು.
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ, ಮಂದಾರ್ತಿ ದುರ್ಗಾ ಸಭಾಭವನದ ಮಾಲಕ ವಿಠಲ ಶೆಟ್ಟಿ ಹಾಗೂ ಶೇಡಿಕೊಡ್ಲು ಉದ್ಯಮಿ ಪ್ರಶಾಂತ್ ಮೊಗವೀರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಕಾಶ್ ಕಿರಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪತ್ರಕರ್ತ ಪ್ರಣೂತ್ ಗಾಣಿಗ ವಂದಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.