


ಡೈಲಿವಾರ್ತೆ:06/ಸೆ./2026

ಚುನಾವಣಾ ರಾಜಕೀಯದಿಂದ ನಿವೃತ್ತಿ: ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಸಕ್ರಿಯ – ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಇಂಗಿತ ವ್ಯಕ್ತಪಡಿಸಿದ್ದು, ಆದರೆ ಸಕ್ರಿಯ ರಾಜಕಾರಣ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ತಮ್ಮ ಪಾತ್ರ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ರಜತ ಮಹೋತ್ಸವ ಸಂಭ್ರಮದಲ್ಲಿ ಮಾತನಾಡಿದ ಅವರು ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಆದರೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿಲ್ಲ. ನಮ್ಮ ಚುನಾವಣಾ ವ್ಯವಸ್ಥೆ ಅತ್ಯಂತ ದುಬಾರಿಯಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕಿದೆ ಎಂದು ಹೇಳಿದರು.
ಸಮಾನ ಅವಕಾಶಗಳು ಎಲ್ಲರಿಗೂ ದೊರೆಯುವವರೆಗೆ ಹಾಗೂ ಸಮಾಜದಿಂದ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ತೊಲಗುವವರೆಗೆ ಹಿಂದುಳಿದ ವರ್ಗಗಳ ಜೊತೆಗಿದ್ದು ಹೋರಾಟ ನಡೆಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು. ಈ ವಿಚಾರದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
ಹಿಂದುಳಿದ ಜಾತಿಯವನೆಂದು ಹೇಳಿಕೊಳ್ಳಲು ಮುಜುಗರವಿಲ್ಲ:
ತಮ್ಮ ಸಾಮಾಜಿಕ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಹಿಂದುಳಿದ ಜಾತಿಗೆ ಸೇರಿದವನೆಂದು ಹೇಳಿಕೊಳ್ಳಲು ತನಗೆ ಯಾವುದೇ ಮುಜುಗರವಿಲ್ಲ ಎಂದು ಹೇಳಿದರು.
ನಮ್ಮ ದೇಶದಲ್ಲಿ ಇದ್ದ ಶ್ರೇಣಿಕೃತ ಚಾತುರ್ವರ್ಣ ವ್ಯವಸ್ಥೆಯಲ್ಲಿ ನಾನು ಶೂದ್ರ ಜಾತಿಗೆ ಸೇರಿದವನು. ಲಿಂಗಾಯತರು, ಒಕ್ಕಲಿಗರು ಸೇರಿದಂತೆ ನಾವೆಲ್ಲರೂ ಶೂದ್ರರೇ ಆಗಿದ್ದೇವೆ ಎಂದು ಅವರು ಪ್ರತಿಪಾದಿಸಿದರು.
ಹಿಂದಿನ ಕಾಲದಲ್ಲಿ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ವರ್ಗಗಳಿಗೆ ಮಾತ್ರ ಶಿಕ್ಷಣದ ಅವಕಾಶ ಲಭ್ಯವಿತ್ತು. ಶೂದ್ರರು ಬುದ್ಧಿಹೀನರಾಗಿದ್ದ ಕಾರಣಕ್ಕೆ ಹಿಂದುಳಿದವರಾಗಿಲ್ಲ, ಬದಲಿಗೆ ಅವರಿಗೆ ಶಿಕ್ಷಣ ಪಡೆಯುವ ಅವಕಾಶವೇ ನಿರಾಕರಿಸಲಾಗಿತ್ತು ಎಂದು ಹೇಳಿದರು.
ಅಂದೇ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದರೆ ಸಮಾಜದಲ್ಲಿ ಇಷ್ಟೊಂದು ಅಸಮಾನತೆ ನಿರ್ಮಾಣವಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಜಾತಿಗಣತಿ ವರದಿ ಜಾರಿಗೆ ಒತ್ತಾಯ:
ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಜಾತಿಗಣತಿ ವಿಚಾರವನ್ನೂ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಈಗಾಗಲೇ ಸ್ವೀಕರಿಸಿರುವುದಾಗಿ ತಿಳಿಸಿದ ಅವರು, ವರದಿ ಬಹಿರಂಗಪಡಿಸದಂತೆ ನ್ಯಾಯಾಲಯದ ಆದೇಶವಿರುವ ಹಿನ್ನೆಲೆಯಲ್ಲಿ ತಡೆಯಾಜ್ಞೆ ತೆರವುಗೊಳಿಸಲು ಕಾನೂನು ಹೋರಾಟ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ತಮ್ಮ ಪಕ್ಷ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮಾತಿಗೆ ಸ್ಪಂದಿಸುವ ಸಂಪೂರ್ಣ ವಿಶ್ವಾಸವಿದೆ ಎಂದ ಸಿದ್ದರಾಮಯ್ಯ, ಜಾತಿಗಣತಿ ಜಾರಿಯಾದರೆ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಕನಿಷ್ಠ ಶೇ.75ರಷ್ಟು ಮೀಸಲಾತಿ ದೊರೆಯಬೇಕು ಎಂದು ಆಗ್ರಹಿಸಿದರು.
ಜೊತೆಗೆ, ವಿವಿಧ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಸಮರ್ಪಕ ರಾಜಕೀಯ ಮೀಸಲಾತಿ ದೊರೆತಾಗ ಮಾತ್ರ ಎಲ್ಲ ವರ್ಗಗಳಿಗೂ ನ್ಯಾಯಯುತ ಪ್ರಾತಿನಿಧ್ಯ ಸಿಗಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಸಾಮಾಜಿಕ ನ್ಯಾಯ, ಸಮಾನ ಅವಕಾಶ ಹಾಗೂ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆಯಲ್ಲಿ ತಮ್ಮ ಹೋರಾಟ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ನೀಡಿದರು.