ಡೈಲಿವಾರ್ತೆ:07/ಸೆ./2026

ಕೋಟ: ಯುವಕರ ಉದ್ಯೋಗ ಭವಿಷ್ಯಕ್ಕೆ ಶ್ರೀಕೃಷ್ಣಪ್ರಸಾದ್ ಫೌಂಡೇಶನ್ ಆಶ್ರಯದಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್: ಸಮಾಜಕ್ಕೆ ಸಂಪನ್ಮೂಲ ಧಾರೆ ಎರೆಯುವವರೇ ನಿಜವಾದ ಸಮಾಜದ ಆಸ್ತಿ – ಸಂಸದ ಕೋಟ

ಕೋಟ: ತಮ್ಮಲ್ಲಿರುವ ಸಂಪನ್ಮೂಲಗಳನ್ನು ಸಮಾಜದ ಅಭಿವೃದ್ಧಿಗೆ ಧಾರೆ ಎರೆದು ಸಮರ್ಪಿಸಿಕೊಳ್ಳುವ ಸಂಪತ್ ಕುಮಾರ್ ಅವರಂತಹ ವ್ಯಕ್ತಿಗಳು ಸಮಾಜದ ಅಮೂಲ್ಯ ಆಸ್ತಿಗಳಾಗಿ ಹೊರಹೊಮ್ಮುತ್ತಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭಾನುವಾರ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್, ಕೋಟ ನೇತೃತ್ವದಲ್ಲಿ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕಂಪ್ಯೂಟರ್ ಶಿಕ್ಷಕರ ಹುದ್ದೆಗಳಿಗೆ ಸರಿಸುಮಾರು 15 ಸಾವಿರ ನೇಮಕಾತಿ ನಡೆಯಲಿದ್ದು, ಈ ಹುದ್ದೆಗಳ ಲಿಖಿತ ಪರೀಕ್ಷೆಗೆ ಪೂರ್ವಭಾವಿಯಾಗಿ ಉಚಿತ ತರಬೇತಿ ನೀಡುತ್ತಿರುವ ವಿ-ಶೈನ್ ಕೋಚಿಂಗ್ ಸೆಂಟರ್ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಪ್ರಸ್ತುತ ಸರ್ಕಾರಿ ಇಲಾಖೆಗಳ ನೇಮಕಾತಿಯಲ್ಲಿ ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿರುವ ಸಂದರ್ಭದಲ್ಲಿ, ಅವಿಭಜಿತ ಉಡುಪಿ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಯುವಜನತೆಗೆ ಹೊಸ ಆಶಾಕಿರಣವಾಗಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಹೊಸ ಆಯಾಮವನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ವಹಿಸಿ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಂತೆ ಯುವಜನತೆ ಉದ್ಯೋಗ ಕ್ಷೇತ್ರದಲ್ಲಿಯೂ ತಮ್ಮದೇ ಆದ ಸಾಧನೆಯ ಹೆಜ್ಜೆ ಗುರುತು ಮೂಡಿಸಬೇಕು. ವಿ-ಶೈನ್ ಕೋಚಿಂಗ್ ಮೂಲಕ ಹೆಚ್ಚಿನ ಯುವಕರು ಶಿಕ್ಷಕರ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕರಾದ ಡಾ. ಪದ್ಮನಾಭ ಸಿ.ಎಚ್., ಆನಂದ್ ಜಿ. ಹಾಗೂ ಸುಧೀರ್ ಪ್ರಭು ಅವರನ್ನು ವಿ-ಶೈನ್ ಕೋಚಿಂಗ್ ಸೆಂಟರ್ ವತಿಯಿಂದ ಗೌರವಿಸಲಾಯಿತು.

ವಿ-ಶೈನ್ ಕೋಚಿಂಗ್ ಸೆಂಟರ್ ಮುಖ್ಯಸ್ಥ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ನಿರ್ದೇಶಕ ಗಿರೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಸಾದ್ ಬಿಲ್ಲವ ವಂದಿಸಿದರು.

ಪೂರ್ವಾಹ್ನ 9.30ರಿಂದ ಆರಂಭಗೊಂಡ ಕಾರ್ಯಾಗಾರ ಸಂಜೆವರೆಗೆ ನಡೆಯಿತು. ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಹಾಗೂ ತರಬೇತಿ ಪಡೆದು ಪ್ರಯೋಜನ ಪಡೆದರು.