ಡೈಲಿವಾರ್ತೆ:07/ಸೆ./2026

ಕುಂದಾಪುರ: ಮೇಲ್ಛಾವಣಿ ಒಡೆದು ನಂದಿನಿ ಹಾಲಿನ ಅಂಗಡಿಗೆ ಕನ್ನ: ₹1.10 ಲಕ್ಷ ನಗದು ದೋಚಿ ಪರಾರಿ!

ಕುಂದಾಪುರ: ಅಂಗಡಿಯ ಮೇಲ್ಛಾವಣಿಯ ತಗಡನ್ನು ಒಡೆದು ಒಳನುಗ್ಗಿದ ಕಳ್ಳರು ಕ್ಯಾಶ್ ಡ್ರಾವರ್‌ನಲ್ಲಿದ್ದ ಸುಮಾರು ₹1.10 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಬಸ್ರೂರು ಮೂರ್ಕೈನಲ್ಲಿ ನಡೆದಿದೆ.

ವಡೇರಹೋಬಳಿ ಗ್ರಾಮದ ನಿವಾಸಿ ಸುರೆಂದ್ರ (43) ಅವರು ಬಸ್ರೂರು ಮೂರ್ಕೈಯಲ್ಲಿ ನಂದಿನಿ ಹಾಲಿನ ಅಂಗಡಿ ನಡೆಸುತ್ತಿದ್ದು, ಸೆಪ್ಟೆಂಬರ್ 6ರಂದು ರಾತ್ರಿ ಸುಮಾರು 10.30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು.

ಸೆಪ್ಟೆಂಬರ್ 7ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಅಂಗಡಿ ತೆರೆದು ಒಳಗೆ ಹೋಗಿ ಪರಿಶೀಲಿಸಿದಾಗ ಅಂಗಡಿಯ ಮೇಲ್ಛಾವಣಿಯ ತಗಡು ಒಡೆದಿರುವುದು ಹಾಗೂ ಕ್ಯಾಶ್ ಡ್ರಾವರ್‌ನಲ್ಲಿದ್ದ ನಗದು ಹಣ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ರಾತ್ರಿ ವೇಳೆ ಯಾರೋ ಕಳ್ಳರು ಅಂಗಡಿಯ ಮೇಲ್ಛಾವಣಿಯ ಸೀಟನ್ನು ಒಡೆದು ಒಳನುಗ್ಗಿ, ಕ್ಯಾಶ್ ಡ್ರಾವರ್‌ನಲ್ಲಿದ್ದ ಸುಮಾರು ₹1,10,000 ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2026ರಂತೆ ಬಿಎನ್‌ಎಸ್ ಕಲಂ 331(4) ಮತ್ತು 305 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.