


ಡೈಲಿವಾರ್ತೆ:08/ಸೆ./2026

ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ-ಮತ್ಯಾಡಿಯಲ್ಲಿ ಗುರುವಂದನಾ ಕಾರ್ಯಕ್ರಮ: ಸಮಯ, ಸಂಸ್ಕಾರ ಮತ್ತು ಶಿಕ್ಷಕರ ಮಾರ್ಗದರ್ಶನವೇ ಯಶಸ್ವಿ ಬದುಕಿನ ಅಡಿಪಾಯ – ಮುರಳಿ ಕಡೆಕಾರ್

ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಸಮಯದ ಸದ್ಬಳಕೆ, ನೈತಿಕ ಮೌಲ್ಯಗಳ ಅಳವಡಿಕೆ ಹಾಗೂ ಶಿಕ್ಷಕರ ಮಾರ್ಗದರ್ಶನ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಸಿದ್ಧ ನಿವೃತ್ತ ಶಿಕ್ಷಕ ಹಾಗೂ ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿ ಮುರಳಿ ಕಡೇಕಾರ್ ಹೇಳಿದರು.

ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಸುಜ್ಞಾನ ಪದವಿಪೂರ್ವ ಕಾಲೇಜು, ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್‌ಗಳ ಜಂಟಿ ಆಶ್ರಯದಲ್ಲಿ 2026ನೇ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅರ್ಥಪೂರ್ಣ ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ವಿಚಲಿತಗೊಳಿಸುವ ಹಾಗೂ ದಾರಿ ತಪ್ಪಿಸುವ ಹತ್ತಾರು ಆಕರ್ಷಣೆಗಳಿವೆ. ಇವುಗಳನ್ನೆಲ್ಲ ಮೀರಿ ಗುರಿಯತ್ತ ಸಾಗುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಬದುಕಿನಲ್ಲಿ ಕಳೆದುಹೋದ ಸಮಯವನ್ನು ಯಾವುದೇ ಕಾರಣಕ್ಕೂ ಮರಳಿ ಪಡೆಯಲು ಸಾಧ್ಯವಿಲ್ಲ. ಜೀವನದ ಪ್ರತಿಯೊಂದು ನಿಮಿಷ ಮತ್ತು ಗಂಟೆಯೂ ಅತ್ಯಂತ ಅಮೂಲ್ಯವಾಗಿದ್ದು, ಈ ಸತ್ಯವನ್ನು ಅರಿತು ಶ್ರದ್ಧೆಯಿಂದ ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಬದುಕು ಖಂಡಿತವಾಗಿಯೂ ಸಫಲವಾಗುತ್ತದೆ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳ ಬದುಕನ್ನು ಸುಂದರವಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯವಾದರೆ, ಆ ವಿದ್ಯಾರ್ಥಿಗಳು ಸಾಧನೆಯ ಶಿಖರಕ್ಕೇರುವುದು ಶಿಕ್ಷಕರಿಗೆ ದೊರೆಯುವ ಅತ್ಯಂತ ದೊಡ್ಡ ಬಹುಮಾನವಾಗಿದೆ. ಮೊಬೈಲ್ ಬೆಳಕನ್ನೂ ನೀಡಬಹುದು, ಬೆಂಕಿಯನ್ನೂ ಹಚ್ಚಬಹುದು. ಆದ್ದರಿಂದ ಅದರಲ್ಲಿರುವ ಉತ್ತಮ ಅಂಶಗಳನ್ನು ಮಾತ್ರ ಸ್ವೀಕರಿಸುವ ವಿವೇಕ ವಿದ್ಯಾರ್ಥಿಗಳಲ್ಲಿರಬೇಕು ಎಂದು ಹೇಳಿದರು.

ಇಂದು ನೈತಿಕ ಶಿಕ್ಷಣದ ಕೊರತೆ ಸಮಾಜವನ್ನು ಕಾಡುತ್ತಿದೆ. ನಿಜವಾದ ಶಿಕ್ಷಣವು ಕೇವಲ ಜ್ಞಾನವನ್ನು ನೀಡುವುದಲ್ಲ, ಉತ್ತಮ ಸಂಸ್ಕಾರವನ್ನೂ ನೀಡಬೇಕು. ಸಿನಿಮಾ ನಟರು ಅಥವಾ ಕ್ರಿಕೆಟ್ ಆಟಗಾರರನ್ನು ಮಾತ್ರ ಆದರ್ಶ ವ್ಯಕ್ತಿಗಳನ್ನಾಗಿ ಕಾಣುವ ಬದಲು, ತಮ್ಮ ಬದುಕಿಗಾಗಿ ಶ್ರಮಿಸುವ ಹೆತ್ತವರನ್ನು ಹಾಗೂ ಸರಿದಾರಿ ತೋರುವ ಶಿಕ್ಷಕರನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸ್ಪಷ್ಟ ಗುರಿಯೊಂದಿಗೆ ಬದುಕು ರೂಪಿಸಿಕೊಳ್ಳಿ: ಗುರುರಾಜ ಗಂಟಿಹೊಳೆ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಪ್ರತಿಯೊಬ್ಬರ ಜೀವನಕ್ಕೂ ಸ್ಪಷ್ಟವಾದ ಹಾಗೂ ಉನ್ನತ ಗುರಿಯೊಂದು ಅಗತ್ಯವಾಗಿದೆ. ನಮ್ಮ ಸಾಂಸ್ಕೃತಿಕ ಬೇರುಗಳು, ಆಚಾರ-ವಿಚಾರಗಳು ಮತ್ತು ಪರಂಪರೆಯನ್ನು ಅರ್ಥೈಸಿಕೊಂಡು ಬದುಕುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಇಂತಹ ಗುರುವಂದನಾ ಕಾರ್ಯಕ್ರಮಗಳು ಯುವಜನತೆಯಲ್ಲಿ ಶಿಕ್ಷಕರ ಬಗ್ಗೆ ಗೌರವ ಮೂಡಿಸುವುದರ ಜತೆಗೆ, ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಅಭಿಮಾನ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಶ್ಲಾಘಿಸಿದರು.
ಸಾಧಕರ ಬದುಕಿನಿಂದ ವಿದ್ಯಾರ್ಥಿಗಳು ಸ್ಪೂರ್ತಿ ಪಡೆಯಬೇಕು: ಡಾ. ರಮೇಶ್ ಶೆಟ್ಟಿ

ಸಂಸ್ಥೆಯ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ, ಪ್ರತಿವರ್ಷವೂ ಶ್ರೇಷ್ಠ ಸಾಧಕರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸುವುದರ ಹಿಂದೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಉದ್ದೇಶವಿದೆ ಎಂದರು.
ವಿದ್ಯಾರ್ಥಿಗಳು ಇಂತಹ ಮಹನೀಯರ ಬದುಕಿನಿಂದ ಪ್ರೇರಣೆ ಪಡೆದು, ಅವರನ್ನು ತಮ್ಮ ಜೀವನದ ಮಾರ್ಗದರ್ಶಕರನ್ನಾಗಿ ಸ್ವೀಕರಿಸಬೇಕು. ಉತ್ತಮ ಕೆಲಸ ಮತ್ತು ಸಾಧನೆಯನ್ನು ಸಮಾಜ ಎಂದಿಗೂ ಗುರುತಿಸುತ್ತದೆ ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದು ಹೇಳಿದರು.
ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಸಿ, ಪ್ರೀತಿಯಿಂದ ತಿದ್ದಿ-ತೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ವಿಶ್ವದಲ್ಲಿಯೇ ಅತ್ಯಂತ ಪವಿತ್ರ ಹಾಗೂ ಗೌರವಾನ್ವಿತ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿಯೂ ಪ್ರಮುಖವಾದದ್ದು ಎಂದರು.
ಇನ್ನೊಬ್ಬರ ಬದುಕಿಗೆ ಆಕಾರ ನೀಡುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಶಿಕ್ಷಕರು ನೀಡುವ ಬುದ್ಧಿಮಾತು ಹಾಗೂ ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕಾಗಿ ಹೆತ್ತವರು ಪಡುವ ಶ್ರಮ ಹಾಗೂ ಮಾಡುವ ತ್ಯಾಗವನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯಬಾರದು. ಬದುಕಿನಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕು ಎಂಬ ಛಲ ಹಾಗೂ ಸ್ಪಷ್ಟ ಗುರಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇರಬೇಕು ಎಂದು ಹುರಿದುಂಬಿಸಿದರು.
ಶ್ರೇಷ್ಠ ಸೇವೆ ಸಲ್ಲಿಸಿದ ಶಿಕ್ಷಕಿಯರಿಗೆ ಗೌರವ


ಇದೇ ಸಂದರ್ಭದಲ್ಲಿ ಶಾಲೆ ಮತ್ತು ಕಾಲೇಜಿನಲ್ಲಿ ಸುದೀರ್ಘ ಅವಧಿಯಿಂದ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಪ್ರೀತಿ ಚಂದ್ರಶೇಖರ ಹಾಗೂ ಸುಜ್ಞಾನ ಪಿಯು ಕಾಲೇಜಿನ ಉಪನ್ಯಾಸಕಿ ಚರಿಷ್ಮಾ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ, ವಿದ್ಯಾರಣ್ಯ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲೆ ಅನಿತಾ ಕುಮಾರಿ, ಮುಖ್ಯೋಪಾಧ್ಯಾಯಿನಿ ಸ್ಪೂರ್ತಿ ಎ., ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕ ರಜತ್ ಭಟ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಕುಮಾರ್ ಧನ್ಯವಾದ ಸಮರ್ಪಿಸಿದರು.