ಡೈಲಿವಾರ್ತೆ:11/ಸೆ./2026

ಮಂಗಳೂರು: ಎಸಿಪಿ ಕಚೇರಿ ಎದುರೇ ದೇವಸ್ಥಾನಕ್ಕೆ ಕನ್ನ: ಗುಳಿಗನಿಗೆ ಈಡುಗಾಯಿ – ತಿಂಗಳೊಳಗೆ ಅಂತರ್‌ಜಿಲ್ಲಾ ಕಳ್ಳರ ಬಂಧನ!

ಉಳ್ಳಾಲ: ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕಚೇರಿಯ ಎದುರಲ್ಲೇ ಇರುವ ಕಲ್ಲಾಪು ಶ್ರೀ ಮಹಾಲಕ್ಷ್ಮಿ ಗಣಪತಿ ದೇವಸ್ಥಾನಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಕವಚ ದೋಚಿದ್ದ ಪ್ರಕರಣ ಸೇರಿದಂತೆ ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನ ಕಳ್ಳತನ ಪ್ರಕರಣದಲ್ಲಿ ನಾಲ್ವರು ಅಂತರ್‌ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಹೆಜಮಾಡಿಯ ಜಾಹೀದ್ ಸಿನಾನ್ (36), ಕಾರ್ಕಳದ ಯಾಸೀನ್ (36), ದಾವಣಗೆರೆಯ ಮಹಮ್ಮದ್ ಅಫ್ರಿದಿ (26) ಹಾಗೂ ಎಸ್.ಕೆ. ಅಬ್ದುಲ್ ಜುಮ್ಮಾನ್ (26) ಬಂಧಿತ ಆರೋಪಿಗಳು.
ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳಿಂದ ಸುಮಾರು ₹11.20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿಸಿ ಕ್ಯಾಮರಾ ಇಲ್ಲದ ದೇವಸ್ಥಾನಕ್ಕೆ ಕನ್ನ

ಕಳೆದ ಆಗಸ್ಟ್ 19ರ ರಾತ್ರಿ ಕಲ್ಲಾಪುವಿನ ಶ್ರೀ ಮಹಾಲಕ್ಷ್ಮಿ ಗಣಪತಿ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು ದೇವಿಯ ವಿಗ್ರಹಕ್ಕೆ ಅಲಂಕರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಕವಚವನ್ನು ದೋಚಿ ಪರಾರಿಯಾಗಿದ್ದರು. ಗಮನಾರ್ಹವೆಂದರೆ, ದೇವಸ್ಥಾನವು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕಚೇರಿಯ ಎದುರಲ್ಲೇ ಇದ್ದರೂ ಕಳ್ಳತನದ ಸಂದರ್ಭದಲ್ಲಿ ಪೊಲೀಸರಿಗೆ ತನಿಖೆಗೆ ನೆರವಾಗುವಂತಹ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿರಲಿಲ್ಲ.
ಯಾವುದೇ ಪ್ರಮುಖ ಸುಳಿವು ಬಿಟ್ಟುಕೊಡದೆ ಕೃತ್ಯ ಎಸಗಿದ್ದರಿಂದ ಪ್ರಕರಣದ ತನಿಖೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಎಸಿಪಿ ಕಚೇರಿಯ ಕಣ್ಣಳತೆಯಲ್ಲೇ ನಡೆದ ಈ ಕಳ್ಳತನ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿತ್ತು.

ಗುಳಿಗನಿಗೆ ಈಡುಗಾಯಿ; ತಿಂಗಳೊಳಗೆ ಕಳ್ಳರ ಬಂಧನ:

ಕಳ್ಳತನದಿಂದ ತೀವ್ರ ಬೇಸರಗೊಂಡಿದ್ದ ಕ್ಷೇತ್ರದ ಹಿರಿಯ ಅರ್ಚಕ ಬಾಲಕೃಷ್ಣ ಭಟ್ ಅವರು ಆರೋಪಿಗಳ ಶೀಘ್ರ ಪತ್ತೆಗಾಗಿ ಪ್ರಾರ್ಥಿಸಿ ಇತ್ತೀಚೆಗೆ ಕ್ಷೇತ್ರಪಾಲ ಗುಳಿಗನ ಸನ್ನಿಧಿಯಲ್ಲಿ ಈಡುಗಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದ್ದರು.
ಇದೀಗ ತಿಂಗಳೊಳಗೇ ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನ ಕಳ್ಳತನ ಪ್ರಕರಣದಲ್ಲಿ ನಾಲ್ವರು ಅಂತರ್‌ಜಿಲ್ಲಾ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು ಕ್ಷೇತ್ರದ ಭಕ್ತರಲ್ಲಿ ಕುತೂಹಲ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ‘ಗುಳಿಗನ ಪವಾಡ’ ಎಂಬ ಭಕ್ತರ ನಂಬಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಆದಿ ಕಿಲ್ಪಾಡಿ ದೈವಸ್ಥಾನ ಕಳ್ಳತನ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ಬಂಧಿತ ಆರೋಪಿಗಳನ್ನು ಉಳ್ಳಾಲ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ವಿಚಾರಣೆಯಿಂದ ಕಲ್ಲಾಪು ಮಹಾಲಕ್ಷ್ಮಿ ಗಣಪತಿ ದೇವಸ್ಥಾನ ಸೇರಿದಂತೆ ಕರಾವಳಿ ಭಾಗದಲ್ಲಿ ನಡೆದಿರುವ ಇತರ ದೇವಸ್ಥಾನ ಕಳ್ಳತನ ಪ್ರಕರಣಗಳಿಗೂ ಸಂಬಂಧಿಸಿದ ಮತ್ತಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.