ಡೈಲಿವಾರ್ತೆ:11/ಸೆ./2026

ಸಾಸ್ತಾನ: ಹದ್ದಿನಬೆಟ್ಟು ಗಣೇಶೋತ್ಸವದಲ್ಲಿ ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಆರಾಧನೋತ್ಸವ ಪುರಸ್ಕಾರ

ಕೋಟ, ಸೆ.11: ಬ್ರಹ್ಮಾವರ ತಾಲೂಕಿನ ಗುಂಡ್ಮಿ ಸಮೀಪದ ಹದ್ದಿನಬೆಟ್ಟು ಯಡಬೆಟ್ಟು ಸಾಮೂಹಿಕ ಶ್ರೀ ಗಣೇಶೋತ್ಸವ ಆರಾಧನೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುವ 29ನೇ ವರ್ಷದ ಶ್ರೀ ಗಣೇಶ ಆರಾಧನೋತ್ಸವದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬರಿಗೆ ‘ಹದ್ದಿನಬೆಟ್ಟು ಆರಾಧನೋತ್ಸವ ಪುರಸ್ಕಾರ’ ನೀಡಿ ಗೌರವಿಸಲಾಗುವುದು.

ಸೆಪ್ಟೆಂಬರ್ 14ರಂದು ಸಂಜೆ 7 ಗಂಟೆಗೆ ಹದ್ದಿನಬೆಟ್ಟು ಪರಿಸರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಜಬ್ಬರಿಗೆ ₹50 ಸಾವಿರ ನಗದು ಹಾಗೂ ಶಾಶ್ವತ ಫಲಕ ಒಳಗೊಂಡ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.

ಸಾಮಾಜಿಕ ಕಳಕಳಿಯೊಂದಿಗೆ ನಡೆಯುವ ಆರಾಧನೋತ್ಸವದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕ ದತ್ತುಸ್ವೀಕಾರ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯ 30 ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರದಂತೆ ವಿದ್ಯಾರ್ಥಿವೇತನ ವಿತರಿಸಲಾಗುವುದು.
ಇದರೊಂದಿಗೆ ಎರಡು ಸ್ಥಳೀಯ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಒಂದು ವರ್ಷದ ಮಾಸಿಕ ಗೌರವಧನ ನೀಡುವ ಕಾರ್ಯಕ್ರಮವೂ ನಡೆಯಲಿದೆ.
ಅನಾರೋಗ್ಯದಿಂದ ಬಳಲುತ್ತಿರುವ 6 ಮಂದಿಗೆ ಸಹಾಯಧನ ವಿತರಿಸುವ ಮೂಲಕ ಸಂಕಷ್ಟದಲ್ಲಿರುವವರ ನೆರವಿಗೆ ಸಮಿತಿ ಮುಂದಾಗಲಿದೆ.

ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಸೇವೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ಅಧ್ಯಕ್ಷ ಅವಿನಾಶ್ ಶೆಟ್ಟಿ ಗುಂಡ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.