ಡೈಲಿವಾರ್ತೆ:16/ಸೆ./2026

ಮೆಕ್ಕಾ: ಆಕಾಶದಲ್ಲೇ ಹೌತಿ ಡ್ರೋನ್ – ಪವಿತ್ರ ನಗರದಲ್ಲಿ ಮೊಳಗಿದ ಯುದ್ಧದ ಸೈರನ್,
ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ಏರ್‌ರೇಡ್‌ ಅಲರ್ಟ್‌: ದಕ್ಷಿಣ ಭಾಗದಲ್ಲಿ ಡ್ರೋನ್‌ ಹೊಡೆದುರುಳಿಸಿದ ಸೌದಿ ಪಡೆ!

ರಿಯಾದ್: ಇಸ್ಲಾಂ ಧರ್ಮದ ಪವಿತ್ರ ನಗರ ಮೆಕ್ಕಾದ ಮೇಲೆಯೇ ವೈಮಾನಿಕ ದಾಳಿ ಭೀತಿ ಆವರಿಸಿದ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮೆಕ್ಕಾ ಸೇರಿದಂತೆ ಜೆಡ್ಡಾ ಮತ್ತು ತೈಫ್ ಗವರ್ನರೇಟ್‌ಗಳಲ್ಲಿ ಮಂಗಳವಾರ ಸೌದಿ ನಾಗರಿಕ ರಕ್ಷಣಾ ಇಲಾಖೆ ತುರ್ತು ವೈಮಾನಿಕ ಎಚ್ಚರಿಕೆ ಘೋಷಿಸಿತು.

ಮೆಕ್ಕಾ ನಗರದಲ್ಲಿ ಇಂತಹ ಎಚ್ಚರಿಕೆ ಇದೇ ಮೊದಲ ಬಾರಿಗೆ ಸೈರನ್ ಮೂಲಕ ಮೊಳಗಿದ್ದು, ಕೆಲವೇ ಹೊತ್ತಿನಲ್ಲಿ ಅಪಾಯ ನಿಯಂತ್ರಣಕ್ಕೆ ಬಂದ ಬಳಿಕ ಅಲರ್ಟ್‌ ಹಿಂಪಡೆಯಲಾಯಿತು.
ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್‌ ದಾಳಿಗಳನ್ನು ಮುಂದುವರಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಮೆಕ್ಕಾ ವಾಯುಪ್ರದೇಶದತ್ತ ಡ್ರೋನ್‌!

ಸ್ಥಳೀಯ ಕಾಲಮಾನ ಸಂಜೆ ಸುಮಾರು 6.50ಕ್ಕೆ ಮೆಕ್ಕಾದ ದಕ್ಷಿಣ ಭಾಗದಲ್ಲಿ ನಿರ್ಬಂಧಿತ ವಾಯುಪ್ರದೇಶದತ್ತ ಸಾಗುತ್ತಿದ್ದ ಹೌತಿ ಡ್ರೋನ್‌ ಅನ್ನು ಸೌದಿ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್‌-ಮಾಲಿಕಿ ತಿಳಿಸಿದ್ದಾರೆ.

2017ರಲ್ಲಿ ನಡೆದ ಕ್ಷಿಪಣಿ ದಾಳಿ ಯತ್ನದ ಬಳಿಕ ಪವಿತ್ರ ನಗರವನ್ನು ಗುರಿಯಾಗಿಸಿಕೊಂಡು ಹೌತಿಗಳು ನಡೆಸಿದ ಎರಡನೇ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಡ್ರೋನ್‌ ಪತ್ತೆಯಾದ ಬೆನ್ನಲ್ಲೇ ಮೆಕ್ಕಾ, ಜೆಡ್ಡಾ ಹಾಗೂ ತೈಫ್‌ ಪ್ರದೇಶಗಳಲ್ಲಿ ನಾಗರಿಕರ ಸುರಕ್ಷತೆಗಾಗಿ ತುರ್ತು ಎಚ್ಚರಿಕೆ ನೀಡಲಾಯಿತು. ಸೈರನ್‌ ಮೊಳಗುತ್ತಿದ್ದಂತೆ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

‘ಅಪಾಯ ತಪ್ಪಿದೆ’ – ಸಿವಿಲ್ ಡಿಫೆನ್ಸ್:

ಅಪಾಯದ ಪರಿಸ್ಥಿತಿ ದೂರವಾದ ಬಳಿಕ ಸೌದಿ ನಾಗರಿಕ ರಕ್ಷಣಾ ಇಲಾಖೆ ಮೆಕ್ಕಾ ನಗರದಲ್ಲಿನ ಅಪಾಯ ತಪ್ಪಿದೆ ಎಂದು ಸ್ಪಷ್ಟಪಡಿಸಿತು. ನಾಗರಿಕರು ಅಧಿಕಾರಿಗಳ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು.
ಗುಂಪು ಸೇರುವುದನ್ನು, ಘಟನೆಗಳ ವಿಡಿಯೋ ಚಿತ್ರೀಕರಣ ಮಾಡುವುದನ್ನು ತಪ್ಪಿಸುವಂತೆ ಮನವಿ ಮಾಡಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ 911ಕ್ಕೆ ಕರೆ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ವಿಮಾನ ಸಂಚಾರಕ್ಕೂ ತಾತ್ಕಾಲಿಕ ನಿರ್ಬಂಧ:
ಮುನ್ನೆಚ್ಚರಿಕೆಯ ಕ್ರಮವಾಗಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ವಿಮಾನ ಸಂಚಾರ ಪುನರಾರಂಭದ ಕ್ರಮ ಕೈಗೊಳ್ಳಲಾಯಿತು.

ಸೌದಿಯತ್ತ ನಿರಂತರ ದಾಳಿ; 13 ಮಂದಿ ಗಾಯ
ಸೌದಿ ಅರೇಬಿಯಾದ ಹಲವು ಪ್ರದೇಶಗಳ ಮೇಲೆ ಹೌತಿಗಳ ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಭದ್ರತಾ ಆತಂಕ ಹೆಚ್ಚಿದೆ. ಸೋಮವಾರ ಖಮಿಸ್ ಮುಶೈತ್‌, ಅಭಾ ಮತ್ತು ತೈಫ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 13 ನಾಗರಿಕರು ಗಾಯಗೊಂಡಿದ್ದು, ಮನೆಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ತೈಲ ಮೂಲಸೌಕರ್ಯಗಳ ಮೇಲೂ ದಾಳಿಯ ಪ್ರಯತ್ನಗಳು ನಡೆದಿದ್ದು, ಕೆಲವೆಡೆ ಬೆಂಕಿ ಕಾಣಿಸಿಕೊಂಡು ಹಲವು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ದಾಳಿಗೆ ಪ್ರತಿಯಾಗಿ ಸೌದಿ ಪಡೆಗಳು ಯೆಮೆನ್‌ನ ತೈಜ್ ನಗರದ ಸುತ್ತಮುತ್ತಲಿನ ಹೌತಿ ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿವೆ.
ಪವಿತ್ರ ಮೆಕ್ಕಾದತ್ತಲೇ ಡ್ರೋನ್‌ ಪ್ರವೇಶಿಸಲು ಯತ್ನಿಸಿರುವ ಬೆಳವಣಿಗೆ ಸೌದಿ ಅರೇಬಿಯಾದ ಭದ್ರತಾ ವ್ಯವಸ್ಥೆಗೆ ಮತ್ತೊಂದು ಸವಾಲಾಗಿ ಪರಿಣಮಿಸಿದ್ದು, ಯೆಮೆನ್ ಸಂಘರ್ಷದ ಪರಿಣಾಮಗಳು ಇದೀಗ ಪವಿತ್ರ ನಗರಗಳ ಸನಿಹಕ್ಕೂ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ.