


ಡೈಲಿವಾರ್ತೆ:16/ಸೆ./2026

ರೇಷನ್ ಕಾರ್ಡ್‌ದಾರರಿಗೆ ಡೆಡ್‌ಲೈನ್ ಶಾಕ್: ಇ-ಕೆವೈಸಿಗೆ 15 ದಿನ ಮಾತ್ರ ಬಾಕಿ – ಸರ್ವರ್ ಸಮಸ್ಯೆ, ಮೊಬೈಲ್ ಆ್ಯಪ್‌ಗೆ ಸರ್ಕಾರದ ಮೊರೆ

ಬೆಂಗಳೂರು: ರಾಜ್ಯದ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಮರು ಇ-ಕೆವೈಸಿ ಪೂರ್ಣಗೊಳಿಸಲು ನಿಗದಿಪಡಿಸಿರುವ ಸೆಪ್ಟೆಂಬರ್ 30ರ ಗಡುವಿಗೆ ಇನ್ನು 15 ದಿನ ಮಾತ್ರ ಬಾಕಿ ಉಳಿದಿದ್ದು, ಕೋಟ್ಯಂತರ ಫಲಾನುಭವಿಗಳ ಇ-ಕೆವೈಸಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಆಹಾರ ಇಲಾಖೆಗೆ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವುದು ಸವಾಲಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಒಟ್ಟು 2,67,64,276 ಅರ್ಹ ಫಲಾನುಭವಿಗಳು ಮರು ಇ-ಕೆವೈಸಿ ಮಾಡಿಸಿಕೊಳ್ಳಬೇಕಿದ್ದು, ಇದುವರೆಗೆ 97,54,197 ಮಂದಿ ಮಾತ್ರ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಅಂದರೆ ಸುಮಾರು 36.44ರಷ್ಟು ಫಲಾನುಭವಿಗಳಷ್ಟೇ ಇ-ಕೆವೈಸಿ ಪೂರ್ಣಗೊಂಡಿದ್ದು, ಇನ್ನೂ ಸುಮಾರು 1.70 ಕೋಟಿ ಮಂದಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
ಇದರ ನಡುವೆ ಸರ್ವರ್ ಸಾಮರ್ಥ್ಯ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಇ-ಕೆವೈಸಿ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯೂ ನಿರ್ಮಾಣವಾಗಿದ್ದು, ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಅವರು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ತಾಂತ್ರಿಕ ಅಡಚಣೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದ್ದಾರೆ. ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಪ್ರಕ್ರಿಯೆ ಸುಗಮಗೊಳಿಸುವ ನಿಟ್ಟಿನಲ್ಲಿ ಇಲಾಖೆಯು ಕ್ರಮ ಕೈಗೊಳ್ಳುತ್ತಿದೆ.
ಮನೆಯಲ್ಲೇ ಇ-ಕೆವೈಸಿಗೆ ಹೊಸ ಆ್ಯಪ್
ನ್ಯಾಯಬೆಲೆ ಅಂಗಡಿಗಳಿಗೆ ಪದೇಪದೆ ಅಲೆದಾಡಬೇಕಾದ ಪರಿಸ್ಥಿತಿಯನ್ನು ತಪ್ಪಿಸಲು ಇಲಾಖೆ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಫೇಸ್ ಆಥೆಂಟಿಕೇಶನ್ ಮೂಲಕ ಮೊಬೈಲ್‌ನಲ್ಲೇ ಇ-ಕೆವೈಸಿ ಪೂರ್ಣಗೊಳಿಸುವ ವ್ಯವಸ್ಥೆಯಿರುವ ವಿಶೇಷ ಆ್ಯಪ್ ಅನ್ನು ಮುಂದಿನ ಒಂದು ವಾರದೊಳಗೆ ಸಾರ್ವಜನಿಕರ ಬಳಕೆಗೆ ತರಲು ಸಿದ್ಧತೆ ನಡೆಸಿದೆ.
ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಅರ್ಹ ಫಲಾನುಭವಿಗಳು ಮೊಬೈಲ್ ಮೂಲಕವೇ ತಮ್ಮ ಗುರುತನ್ನು ದೃಢೀಕರಿಸಿ ಇ-ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ. ಇದರಿಂದ ನ್ಯಾಯಬೆಲೆ ಅಂಗಡಿಗಳ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.
ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ಕೊನೆಯ ದಿನಗಳವರೆಗೆ ಕಾಯದೆ, ತಮ್ಮ ಕುಟುಂಬದ ಅರ್ಹ ಸದಸ್ಯರ ಇ-ಕೆವೈಸಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ. ಸೆಪ್ಟೆಂಬರ್ 30ರ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ 15 ದಿನಗಳಷ್ಟೇ ಇರುವುದರಿಂದ ಮುಂದಿನ ದಿನಗಳಲ್ಲಿ ಇ-ಕೆವೈಸಿ ಕೇಂದ್ರಗಳು ಹಾಗೂ ಡಿಜಿಟಲ್ ವ್ಯವಸ್ಥೆಯ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.