


ಡೈಲಿವಾರ್ತೆ:20/ಸೆ./2026

ವ್ಹೀಲಿಂಗ್ ಪುಂಡರ ಹುಚ್ಚಾಟಕ್ಕೆ ಅಮಾಯಕನ ಬಲಿ: ಅಪಘಾತ ತಪ್ಪಿಸಲು ಹೋಗಿ ಟಿಟಿ ವಿದ್ಯುತ್ ಕಂಬಕ್ಕೆ ಡಿಕ್ಕಿ – ಯುವಕ ಸಾವು, ಐವರಿಗೆ ಗಂಭೀರ ಗಾಯ

ಬೆಂಗಳೂರು, ಸೆ.20: ನಗರದಲ್ಲಿ ಅಪಾಯಕಾರಿ ವ್ಹೀಲಿಂಗ್ ನಡೆಸುತ್ತಿರುವ ಪುಂಡರ ಹುಚ್ಚಾಟಕ್ಕೆ ಮತ್ತೊಂದು ಅಮೂಲ್ಯ ಜೀವ ಬಲಿಯಾಗಿದೆ. ವ್ಹೀಲಿಂಗ್ ಮಾಡುತ್ತಿದ್ದ ಬೈಕ್ ಸವಾರರು ಏಕಾಏಕಿ ಅಡ್ಡ ಬಂದ ಪರಿಣಾಮ ಅವರನ್ನು ತಪ್ಪಿಸಲು ಯತ್ನಿಸಿದ ಟಿಟಿ ವಾಹನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ತಡರಾತ್ರಿ ನಡೆದಿದೆ.
ಲಗ್ಗೆರೆ ಸಮೀಪದ ಯುವಕರು ತಡರಾತ್ರಿ ಟಿಟಿ ವಾಹನದಲ್ಲಿ ತೆರಳುತ್ತಿದ್ದರು. ಐದಾರು ಮಂದಿ ಪ್ರಯಾಣಿಸುತ್ತಿದ್ದ ವಾಹನವನ್ನು ರವಿ ಎಂಬಾತ ಚಲಾಯಿಸುತ್ತಿದ್ದ. ಅನ್ನಪೂರ್ಣೇಶ್ವರಿ ನಗರದ ಮಹದೇಶ್ವರ ದೇವಾಲಯದ ಬಳಿ ವಾಹನ ಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಕೆಲವರು ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಏಕಾಏಕಿ ಟಿಟಿ ವಾಹನಕ್ಕೆ ಅಡ್ಡ ಬಂದಿದ್ದಾರೆ ಎನ್ನಲಾಗಿದೆ.
ಈ ವೇಳೆ ಬೈಕ್ ಸವಾರರನ್ನು ತಪ್ಪಿಸಲು ಚಾಲಕ ರವಿ ಪ್ರಯತ್ನಿಸಿದ್ದು, ನಿಯಂತ್ರಣ ಕಳೆದುಕೊಂಡ ಟಿಟಿ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಮನೋಜ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಳಿದ ಐವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಮನೋಜ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಆಂಬುಲೆನ್ಸ್ ವಿಳಂಬಕ್ಕೆ ಆಕ್ರೋಶ:
ಅಪಘಾತ ಸಂಭವಿಸಿ ಸುಮಾರು ಒಂದು ಗಂಟೆ ಕಳೆದರೂ ಆಂಬುಲೆನ್ಸ್ ಸ್ಥಳಕ್ಕೆ ಬಂದಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಳಿಕ ಬಂದ ಆಂಬುಲೆನ್ಸ್‌ನಲ್ಲೂ ಚಾಲಕನೊಬ್ಬನೇ ಇದ್ದರು ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಸ್ಥಳೀಯರು ಆಕ್ರೋಶಗೊಂಡು ಗಲಾಟೆ ನಡೆಸಿದರು.
ನಗರದ ವಿವಿಧೆಡೆ ನಿರಂತರವಾಗಿ ನಡೆಯುತ್ತಿರುವ ಅಪಾಯಕಾರಿ ವ್ಹೀಲಿಂಗ್ ವಿರುದ್ಧವೂ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ವ್ಹೀಲಿಂಗ್ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.