ಡೈಲಿವಾರ್ತೆ:20/ಸೆ./2026

ಅಕ್ಟೋಬರ್ 1ರಿಂದ ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ

ನವದೆಹಲಿ, ಸೆ.20: ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿ ಪಡೆಯುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ನಿಯಮ ಜಾರಿಗೊಳಿಸಿದ್ದು, ಅಕ್ಟೋಬರ್ 1ರಿಂದ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಲಿದೆ. ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ದರದ ಸಿಲಿಂಡರ್ ಬುಕ್ಕಿಂಗ್ ಸೌಲಭ್ಯ ಲಭ್ಯವಾಗುವುದಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.

ಈಗಾಗಲೇ ದೃಢೀಕರಣ ಪೂರ್ಣಗೊಳಿಸಿರುವ ಗ್ರಾಹಕರು ಯಾವುದೇ ಹೆಚ್ಚುವರಿ ಕ್ರಮ ಕೈಗೊಳ್ಳಬೇಕಿಲ್ಲ. ಸೆ.19ರ ವೇಳೆಗೆ ದೇಶದ ಒಟ್ಟು ಸಕ್ರಿಯ ಗೃಹ ಬಳಕೆಯ ಎಲ್‌ಪಿಜಿ ಗ್ರಾಹಕರ ಪೈಕಿ ಶೇ.89.9ರಷ್ಟು, ಅಂದರೆ 27.43 ಕೋಟಿ ಗ್ರಾಹಕರು ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಿದ್ದಾರೆ.
ಬಯೋಮೆಟ್ರಿಕ್ ಪೂರ್ಣಗೊಳಿಸದಿದ್ದರೂ ಸಾಮಾನ್ಯ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಪಡೆಯಲು ಅವಕಾಶವಿದೆ, ಆದರೆ ಸಬ್ಸಿಡಿ ಸೌಲಭ್ಯ ದೊರೆಯುವುದಿಲ್ಲ. ವಾಣಿಜ್ಯ ಹಾಗೂ ಕೈಗಾರಿಕಾ ಉದ್ದೇಶಗಳಿಗೆ ಗೃಹ ಬಳಕೆಯ ಸಬ್ಸಿಡಿ ಸಿಲಿಂಡರ್ ದುರ್ಬಳಕೆಯಾಗುವುದನ್ನು ತಡೆಯುವುದು ಮತ್ತು ನಕಲಿ, ಅನರ್ಹ ಸಂಪರ್ಕಗಳನ್ನು ಪತ್ತೆಹಚ್ಚಿ ನಿಯಂತ್ರಿಸುವುದು ಈ ಕ್ರಮದ ಉದ್ದೇಶವಾಗಿದೆ.

ಎಲ್‌ಪಿಜಿ ವಿತರಣೆ ವೇಳೆ, ವಿತರಕರ ಕಚೇರಿಯಲ್ಲಿ ಅಥವಾ IndianOil ONE, HelloBPCL ಮತ್ತು HP PAY ಮೊಬೈಲ್ ಆ್ಯಪ್‌ಗಳ ಮೂಲಕ ಗ್ರಾಹಕರು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬಹುದು.

ಜೂನ್ 30ರಿಂದ ಹಲವು ಬಾರಿ ವಿಸ್ತರಿಸಲಾಗಿದ್ದ ಗಡುವು ಇದೀಗ ಸೆ.14ಕ್ಕೆ ಅಂತ್ಯಗೊಂಡಿದ್ದು, ಅಕ್ಟೋಬರ್ 1ರಿಂದ ಹೊಸ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ದೇಶಾದ್ಯಂತ ಅಕ್ಟೋಬರ್ 2023ರಿಂದ ಈ ದೃಢೀಕರಣ ಅಭಿಯಾನ ನಡೆಯುತ್ತಿದ್ದು, ತೈಲ ಕಂಪನಿಗಳು ಗ್ರಾಹಕರಿಗೆ 12 ಕೋಟಿಗೂ ಅಧಿಕ ಎಸ್‌ಎಂಎಸ್ ಮತ್ತು ವಾಟ್ಸ್‌ಆ್ಯಪ್ ಸಂದೇಶಗಳನ್ನು ಕಳುಹಿಸಿವೆ.

ಸೆಪ್ಟೆಂಬರ್‌ನಲ್ಲಿ 14.2 ಕೆಜಿ ಸಿಲಿಂಡರ್‌ಗೆ ಅನ್ವಯಿಸುವ ಪರೋಕ್ಷ ಸಬ್ಸಿಡಿ ಸುಮಾರು ₹210ರಷ್ಟಿದೆ. ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸದ ಗ್ರಾಹಕರು ಅಕ್ಟೋಬರ್ 1ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರ ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ 1800 2333 555 ಸಹಾಯವಾಣಿ ಸಂಪರ್ಕಿಸಬಹುದು.