ಡೈಲಿವಾರ್ತೆ:21/ಸೆ./2026

ಬೆಳ್ವೆ ವ್ಯ.ಸೇ.ಸ. ಸಂಘದ ಸುವರ್ಣ ಮಹೋತ್ಸವ ಹಾಗೂ ಸುವರ್ಣ ಸೌಧಕ್ಕೆ ಶಿಲಾನ್ಯಾಸ ಕಾರ್ಯಕ್ರಮ:
ರೈತರ ಬದುಕಿಗೆ ಪೂರಕ ಸೇವೆ: ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಜಿಲ್ಲೆಗೆ ಮಾದರಿ – ಪ್ರತಾಪಚಂದ್ರ ಶೆಟ್ಟಿ

ಬೆಳ್ವೆ, ಸೆ.21: ವ್ಯವಸಾಯ ಕ್ಷೇತ್ರಕ್ಕೆ ಪೂರಕವಾಗಿ ರೈತರು ಹಾಗೂ ಗ್ರಾಮೀಣ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಾ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ ಜಿಲ್ಲೆಗೆ ಆದರ್ಶವಾಗಿ ಬೆಳೆದು ನಿಂತಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು. ಅವರು ಸೆ. 21 ರಂದು ಸೋಮವಾರ ನಡೆದ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸುವರ್ಣ ಸೌಧಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರದ ಮೂಲಕ ಗ್ರಾಮೀಣ ಜನರಿಗೆ ಅಗತ್ಯ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವುದರ ಜತೆಗೆ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು. ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಗೋದಾಮು, ಒಣಗಿಸುವ ಯಂತ್ರ, ಮೌಲ್ಯವರ್ಧನೆ ಸೇರಿದಂತೆ ರೈತರಿಗೆ ಅನುಕೂಲವಾಗುವ ಮೂಲಸೌಕರ್ಯಗಳನ್ನು ಸಹಕಾರಿ ಸಂಸ್ಥೆಗಳು ರೂಪಿಸಬೇಕು ಎಂದು ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಆಂಬ್ಯುಲೆನ್ಸ್‌ನಂತಹ ಸಾರ್ವಜನಿಕ ಸೇವೆಗಳನ್ನು ಆರಂಭಿಸುವುದಷ್ಟೇ ಅಲ್ಲದೆ, ಅವುಗಳನ್ನು ನಿರಂತರವಾಗಿ ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿಯೂ ಸಹಕಾರಿ ಸಂಸ್ಥೆಗಳ ಮೇಲಿದೆ. ಜನರು ವಿಶ್ವಾಸವಿಟ್ಟು ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಸಹಕಾರಿ ಸಂಸ್ಥೆಗಳು ಮತ್ತಷ್ಟು ಬಲಿಷ್ಠವಾಗುತ್ತವೆ ಎಂದರು.

ಸಹಕಾರಿ ಸಂಘಗಳ ಅಭಿವೃದ್ಧಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ಸಿಇಒಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಸಂಘಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತವೆ. ಬೆಳ್ವೆ ಸಂಘದಲ್ಲಿ ಉತ್ತಮ ಸಿಬ್ಬಂದಿ ತಂಡವಿದ್ದು, ಕಳೆದ 22 ವರ್ಷಗಳಿಂದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿಯವರ ಸಮರ್ಥ ನೇತೃತ್ವದಲ್ಲಿ ಸಂಘ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದರು.

₹115 ಕೋಟಿ ಠೇವಣಿ; ₹43 ಕೋಟಿ ಕೃಷಿ ಸಾಲ – ಎಸ್. ಜಯರಾಮ ಶೆಟ್ಟಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಮಾತನಾಡಿ, ಐದು ದಶಕಗಳ ಹಿಂದೆ ಆರಂಭಗೊಂಡ ಸಂಘವು ಹಿರಿಯ ಸದಸ್ಯರ ಸಹಕಾರ ಹಾಗೂ ನೌಕರರ ಪ್ರಾಮಾಣಿಕ ಸೇವೆಯಿಂದ ಇಂದು 13,458 ಸದಸ್ಯರನ್ನು ಹೊಂದಿರುವ ಬೃಹತ್ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಸಂಘದಲ್ಲಿ ₹115 ಕೋಟಿ ಠೇವಣಿ ಇದ್ದು, ₹121 ಕೋಟಿ ಸಾಲ ವಿತರಿಸಲಾಗಿದೆ. ಇದರಲ್ಲಿ ₹43 ಕೋಟಿ ಕೃಷಿ ಸಾಲವಾಗಿದೆ. ಪ್ರಸಕ್ತವಾಗಿ ₹2.85 ಕೋಟಿ ಲಾಭ ಗಳಿಸಿದ್ದು, ಸಾಲದ ವಸೂಲಾತಿ ಪ್ರಮಾಣ ಶೇ.99ಕ್ಕೂ ಅಧಿಕವಾಗಿದೆ. ಸ್ವಸಹಾಯ ಸಂಘಗಳ ಸಾಲ ಮರುಪಾವತಿ ಶೇ.100ರಷ್ಟಿದೆ ಎಂದು ಅವರು ವಿವರಿಸಿದರು.
ಏಳು ಗ್ರಾಮಗಳ ವ್ಯಾಪ್ತಿಯ ಜನರ ಸೇವೆಗೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಉಚಿತ ಸೇವೆ ಒದಗಿಸುವ ಉದ್ದೇಶದಿಂದ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ. ಸುವರ್ಣ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ 4,000ಕ್ಕೂ ಅಧಿಕ ಜನರು ಆಗಮಿಸಿರುವುದು ಸಂತಸ ತಂದಿದೆ ಎಂದರು.

ಗ್ರಾಮೀಣ ಭಾಗಕ್ಕೆ ಉಚಿತ ಆಂಬ್ಯುಲೆನ್ಸ್ ಸೇವೆ – ವಿನಯ್ ಕುಮಾರ್ ಸೂರಿಂಜೆ

ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿ, ಬೆಳ್ವೆ ಸಹಕಾರಿ ಸಂಘವು ರೈತರ ವಿಶ್ವಾಸ ಗಳಿಸಿದ್ದು, ಸಂಸ್ಥೆ ಬೆಳೆದು ಬಂದಿರುವ ರೀತಿ ಶ್ಲಾಘನೀಯವಾಗಿದೆ. ಗ್ರಾಮೀಣ ಭಾಗದ ಜನರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಸಂಘ ಮತ್ತೊಂದು ಸಮಾಜಮುಖಿ ಹೆಜ್ಜೆ ಇಟ್ಟಿದೆ ಎಂದರು.


ಸದಸ್ಯರ ಮರಣ ಪರಿಹಾರ ನಿಧಿ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ. ಮಹೇಶ್ ಹೆಗ್ಡೆ ಚಾಲನೆ ನೀಡಿ ಮಾತನಾಡಿ, 1976ರಲ್ಲಿ ಆರಂಭಗೊಂಡ ಸಂಘವು ಐದು ದಶಕಗಳ ಪಯಣದಲ್ಲಿ ರೈತರ ಹಾಗೂ ಗ್ರಾಮೀಣ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, 50 ವರ್ಷಗಳ ಹಿಂದೆ ರಾಮರಾಯ ಅವರು ಸಮಾನ ಮನಸ್ಕರನ್ನು ಒಗ್ಗೂಡಿಸಿ ಆರಂಭಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್., ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಿ. ಸತೀಶ್ ಕಿಣಿ, ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕುಂದಾಪುರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಮಲ್ಯಾಡಿ ಶಿವರಾಮ ಶೆಟ್ಟಿ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಸಾಧಕರಿಗೆ ಗೌರವ:
ಸಂಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಿದ ಮಾಜಿ ಅಧ್ಯಕ್ಷರಾದ ರಾಮರಾಯ ಹಾಲಂಬಿ, ಹಾಲಾಡಿ ಮಹಾಬಲ ಶೆಟ್ಟಿ, ಯಳಂತೂರು ಸಂಜೀವ ಶೆಟ್ಟಿ, ಧರ್ಮರಾಜ ಶೆಟ್ಟಿ, ಶೇಖರ ಶೆಟ್ಟಿ ಚಾರಬೈಲು ಹಾಗೂ ಎ. ಪ್ರಸಾದ್ ಶೆಟ್ಟಿ ಅವರ ಕುಟುಂಬಸ್ಥರನ್ನು ಗೌರವಿಸಲಾಯಿತು.

ಸಂಸ್ಥೆಗೆ ಕಟ್ಟಡ ನೀಡಿದ ಕೃಷ್ಣರಾಯ ಹಾಲಂಬಿ, ಸಂಸ್ಥಾಪಕ ಕಾರ್ಯದರ್ಶಿ ಸುಬ್ರಾಯ ಅಲ್ಸೆ, ಹಿರಿಯ ಸದಸ್ಯರಾದ ಶಂಕರನಾರಾಯಣ ಅಲ್ಸೆ ಹಾಗೂ ಎಚ್. ಸುರೇಶ್ ಶೆಟ್ಟಿ ಮತ್ತು ಅಂತಾರಾಷ್ಟ್ರೀಯ ಯೋಗಪಟು ರಿಷಾ ಆರ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತಿಕುಮಾರ್ ಶೆಟ್ಟಿ ವರದಿ ವಾಚಿಸಿ, ಸುವರ್ಣ ಮಹೋತ್ಸವದ ಅಂಗವಾಗಿ ವರ್ಷಪೂರ್ತಿ 50 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ದಯಾನಂದ ಆರ್. ಶೆಟ್ಟಿ, ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ, ದಯಾನಂದ ಪೂಜಾರಿ, ಎಚ್.ಕೆ. ಸೀತಾರಾಮ ಶೆಟ್ಟಿ, ಉದಯ್ ಶೆಟ್ಟಿ, ಇಚ್ಚಿತಾರ್ಥ ಶೆಟ್ಟಿ, ಜಯದೇವ ಹೆಗ್ಡೆ, ಸವಿತಾ ಶೆಟ್ಟಿ, ಸುಜಾತ ಪೂಜಾರಿ, ಕೃಷ್ಣ ನಾಯ್ಕ, ಶಿವರಾಮ್, ಪ್ರದೀಪ್ ಹಾಗೂ ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಹರೀಶ್ ಕಿಣಿ ಬಿ. ಸ್ವಾಗತಿಸಿದರು. ಚಂದ್ರಶೇಖರ ಶೆಟ್ಟಿ ವಂದಿಸಿದರು. ಪತ್ರಕರ್ತ ಸುಬ್ಬು ಹಾಗೂ ರೇವತಿ ಕೋಟ ಕಾರ್ಯಕ್ರಮ ನಿರೂಪಿಸಿದರು.