


ಡೈಲಿವಾರ್ತೆ: 15/ನ./2026




ಕೌಟುಂಬಿಕ ಕಲಹದ ನಡುವೆ ತಂದೆಯ ಕ್ರೌರ್ಯಕ್ಕೆ ಬಲಿಯಾದ 16ರ ಬಾಲಕ: ಅರೆಕೋಲಿನಿಂದ ಹೊಡೆದು ಮಗನನ್ನೇ ಕೊಂದ ಪಾಪಿ ತಂದೆ!

ಕುಣಿಗಲ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಅಪ್ರಾಪ್ತ ಮಗನ ಮೇಲೆ ಅರೆಕೋಲಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ನವೆಂಬರ್ 15ರ ಭಾನುವಾರ ಬೆಳಗಿನ ಜಾವ ತಾಲೂಕಿನ ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ.
ತಂದೆಯ ಹಲ್ಲೆಯಿಂದ ಮೃತಪಟ್ಟ ಬಾಲಕನನ್ನು ಚೌಡನಾಯಕನಪಾಳ್ಯ ಗ್ರಾಮದ ನಿವಾಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸುನೀಲ್ ಗೌಡ (16) ಎಂದು ಗುರುತಿಸಲಾಗಿದೆ. ಮಗನ ಹತ್ಯೆಗೈದ ಆರೋಪದಲ್ಲಿ ತಂದೆ ನಂಜೇಗೌಡನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಹಿನ್ನೆಲೆ: ನಂಜೇಗೌಡ ಮತ್ತು ಆತನ ಪತ್ನಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ಸಂಭವಿಸಿತ್ತು ಎನ್ನಲಾಗಿದೆ. ಈ ವೇಳೆ ತೀವ್ರವಾಗಿ ಕುಪಿತಗೊಂಡ ನಂಜೇಗೌಡ, ಭಾನುವಾರ ಬೆಳಗಿನ ಜಾವ ಸುಮಾರು 3:30ರ ವೇಳೆಗೆ ಪತ್ನಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ಪತ್ನಿ ಬಾಗಿಲು ತೆರೆಯುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಆತ ಬಾಗಿಲು ತೆರೆಯದೆ ಹಠಮಾರಿ ವರ್ತನೆ ತೋರಿದ್ದಾನೆ.
ಇತ್ತ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಸುನೀಲ್ ಗೌಡ ಬೆಳಗ್ಗೆ ಸುಮಾರು 6 ಗಂಟೆಗೆ ಪಾಠಕ್ಕೆ ತೆರಳುವ ಸಲುವಾಗಿ ಬಾಗಿಲು ತೆರೆಯುವಂತೆ ತಂದೆಯನ್ನು ಕೇಳಿಕೊಂಡಿದ್ದಾನೆ. ಆದರೆ ನಂಜೇಗೌಡ ಬಾಗಿಲು ತೆರೆಯಲು ನಿರಾಕರಿಸಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಮನೆಯೊಳಗಿನಿಂದ ಸುನೀಲ್ ಗೌಡ ‘ಅಮ್ಮ’ ಎಂದು ಜೋರಾಗಿ ಕಿರುಚಿಕೊಂಡಿದ್ದಾನೆ. ಮಗನ ಕೂಗು ಕೇಳಿದ ತಾಯಿ ಆತಂಕಗೊಂಡು ಮತ್ತೆ ಬಾಗಿಲು ತೆರೆಯುವಂತೆ ಪತಿಯನ್ನು ಒತ್ತಾಯಿಸಿದ್ದಾಳೆ. ಸ್ಥಳೀಯ ಗ್ರಾಮಸ್ಥರೂ ಬಾಗಿಲು ತೆರೆಯುವಂತೆ ಮನವಿ ಮಾಡಿದರೂ ನಂಜೇಗೌಡ ಯಾವುದೇ ಪ್ರತಿಕ್ರಿಯೆ ನೀಡದೆ ಮನೆಯೊಳಗೇ ಉಳಿದಿದ್ದಾನೆ.
ಪೊಲೀಸರಿಂದ ಬಾಗಿಲು ಒಡೆದು ಪ್ರವೇಶ: ಘಟನೆಯ ಗಂಭೀರತೆ ಅರಿತ ಕುಣಿಗಲ್ ವೃತ್ತ ನಿರೀಕ್ಷಕ ಮಾದ್ಯಾನಾಯಕ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಮನೆಯ ಬಾಗಿಲು ತೆರೆಯುವಂತೆ ನಂಜೇಗೌಡನಿಗೆ ಪೊಲೀಸರು ಸೂಚನೆ ನೀಡಿದರೂ ಆತ ಬಾಗಿಲು ತೆರೆಯಲು ಮುಂದಾಗಿಲ್ಲ. ಕೊನೆಗೆ ಪೊಲೀಸರು ಕಿಟಕಿ ಹಾಗೂ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ, ಸುನೀಲ್ ಗೌಡ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ನಂಜೇಗೌಡನನ್ನು ವಶಕ್ಕೆ ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯಿಂದಲೇ ಅಪ್ರಾಪ್ತ ಮಗನ ಹತ್ಯೆಯಾಗಿರುವ ಘಟನೆ ಗ್ರಾಮದಲ್ಲಿ ತೀವ್ರ ಆಘಾತ ಮೂಡಿಸಿದೆ.

