


ಡೈಲಿವಾರ್ತೆ: 15/ನ./2026




ಕೆಮಿಕಲ್ ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಸಾವು! 10 ದಿನಗಳ ಹೋರಾಟ ದುರಂತ ಅಂತ್ಯ!

ಬೆಂಗಳೂರು: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿಸಿ ರಾಸಾಯನಿಕ ತುಂಬಿದ್ದ ಬಕೆಟ್‌ಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 1 ವರ್ಷ 9 ತಿಂಗಳ ಮಗು, ಸತತ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಬದುಕುಳಿಯದೆ ಮೃತಪಟ್ಟಿರುವ ದಾರುಣ ಘಟನೆ ನಗರದ ಶ್ರೀರಾಂಪುರದ ಎಲ್.ಎನ್. ಪುರಂನಲ್ಲಿ ನಡೆದಿದೆ.
ಮೃತ ಮಗುವನ್ನು ಸುಬ್ರಮಣಿ ಎಂದು ಗುರುತಿಸಲಾಗಿದೆ. ನವೆಂಬರ್ 2ರಂದು ಸಂಭವಿಸಿದ್ದ ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗು, ಸಾವು-ಬದುಕಿನ ನಡುವೆ ಹೋರಾಡಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ. ಮಗುವಿನ ಸಾವಿನಿಂದ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಸುಬ್ರಮಣಿ ತನ್ನ ಕುಟುಂಬದೊಂದಿಗೆ ವಾಸವಿದ್ದ ಮನೆಯ ಸಮೀಪದಲ್ಲೇ ಶಿವಂ ಕಾಪರ್ ಮೇಕರ್ ಎಂಬ ರಾಸಾಯನಿಕ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ನವೆಂಬರ್ 2ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಮಗು ತನ್ನ 8 ವರ್ಷದ ಅಕ್ಕನೊಂದಿಗೆ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಆಟವಾಡುತ್ತಾ ಕಾರ್ಖಾನೆಯ ಆವರಣಕ್ಕೆ ತೆರಳಿದ ಮಗು, ಅಲ್ಲಿ ಬಿಸಿ ರಾಸಾಯನಿಕ ತುಂಬಿಸಿಟ್ಟಿದ್ದ ಬಕೆಟ್‌ಗೆ ಆಕಸ್ಮಿಕವಾಗಿ ಬಿದ್ದಿದೆ ಎನ್ನಲಾಗಿದೆ.
ಬಕೆಟ್‌ನಲ್ಲಿದ್ದ ಬಿಸಿ ರಾಸಾಯನಿಕದಿಂದಾಗಿ ಮಗುವಿನ ದೇಹಕ್ಕೆ ತೀವ್ರ ಸುಟ್ಟ ಗಾಯಗಳಾಗಿವೆ. ಘಟನೆ ಗಮನಿಸಿದ ಮಗುವಿನ ಅಕ್ಕ ಕೂಡಲೇ ಕಾರ್ಖಾನೆಯಲ್ಲಿದ್ದವರ ಗಮನಕ್ಕೆ ತಂದಿದ್ದು, ಅವರು ಮಗುವನ್ನು ಬಕೆಟ್‌ನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.
ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಗಾಯಗಳ ತೀವ್ರತೆ ಹಾಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯದ ಹಿನ್ನೆಲೆಯಲ್ಲಿ ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. ಸತತ 10 ದಿನಗಳ ಚಿಕಿತ್ಸೆಯ ಬಳಿಕ ಮಗು ಮೃತಪಟ್ಟಿದೆ.
ಮಗು ರಾಸಾಯನಿಕ ತುಂಬಿದ್ದ ಬಕೆಟ್‌ಗೆ ಬೀಳುವ ಘಟನೆ ಕಾರ್ಖಾನೆಯ ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

