


ಡೈಲಿವಾರ್ತೆ: 15/ನ./2026




ಶಾಲಾ ವೇದಿಕೆಯಲ್ಲಿ ರಾಜಕೀಯ ಭಾಷಣ: ಕಾಂಗ್ರೆಸ್ ಪಕ್ಷವನ್ನು ‘ದರಿದ್ರ ಪಕ್ಷ’ ಎಂದು ಟೀಕಿಸಿದ ಶಾಸಕ ಹರೀಶ್ ಪೂಂಜ – ಮಕ್ಕಳಿಂದ ಮೋದಿ ಪರ ಘೋಷಣೆ!

ಬೆಳ್ತಂಗಡಿ, ನ.15: ಶಾಲೆಯ ಸಭಾಭವನ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಂಡ ಆರೋಪದ ನಡುವೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ‘ದರಿದ್ರ ಪಕ್ಷ’ ಎಂದು ಟೀಕಿಸಿದ ಅವರು, ವಿದ್ಯಾರ್ಥಿಗಳು ಕಾಂಗ್ರೆಸ್ ಪಕ್ಷದ ಹಿಂದೆ ಹೋಗಬಾರದು ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನೂತನ ಸಭಾಭವನ ಉದ್ಘಾಟನೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭಾಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ನಾಮಕರಣ ಮಾಡಿರುವುದಕ್ಕೆ ಸರಕಾರದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಇಲಾಖೆಯ ಸೂಚನೆಯ ಮೇರೆಗೆ ಉದ್ಘಾಟನಾ ಕಾರ್ಯಕ್ರಮ ರದ್ದುಗೊಂಡು, ಕೇವಲ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಆದರೆ ಈ ಸಮಾರಂಭದ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಭಾಷಣದ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕಾಂಗ್ರೆಸ್ನಂತಹ ‘ದರಿದ್ರ ಪಕ್ಷ’ದ ಹಿಂದೆ ಎಂದಿಗೂ ಹೋಗಬಾರದು. ಅಂತಹ ಪಕ್ಷವನ್ನು ನಂಬಿಕೊಂಡು ಮುನ್ನಡೆಯಬಾರದು ಎಂದು ಹೇಳಿಕೆ ನೀಡಿದರು. ದೇಶವು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿದೆ ಎಂದು ಪ್ರತಿಪಾದಿಸಿದ ಅವರು, ವಿದ್ಯಾರ್ಥಿಗಳ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗೆ ಅಡ್ಡಿಪಡಿಸುವವರನ್ನು ಬೆಂಬಲಿಸಬಾರದು ಎಂದು ಕರೆ ನೀಡಿದರು.
ಶಾಲೆಯ ಅಭಿವೃದ್ಧಿಗೆ ಅನುದಾನ ಒದಗಿಸುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲಿಂದಾದರೂ ಕಷ್ಟಪಟ್ಟು ಅನುದಾನ ತಂದು ಶಾಲೆಯನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮ ಆಯೋಜಿಸಿ ಎಲ್ಲರಿಗೂ ಉತ್ತರ ನೀಡುವುದಾಗಿಯೂ ಹೇಳಿದರು.
ಇದೇ ವೇಳೆ ಬಸವೇಶ್ವರ ದೇವರನ್ನು ಸ್ಮರಿಸಿ, ಇಂತಹ ದುಷ್ಟ ಬುದ್ಧಿಗಳಿಗೆ ಆದಷ್ಟು ಬೇಗ ಮುಕ್ತಿ ನೀಡುವಂತೆ ಪ್ರಾರ್ಥಿಸುವುದಾಗಿ ಹೇಳಿದ ಶಾಸಕರು, ಶಾಲೆಗಳಲ್ಲಿ ರಾಜಕೀಯ ಮಾಡಬಾರದು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾದರೆ ಬಸವೇಶ್ವರರು ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನೂ ಆಡಿದರು. ತಾವು ಯಾವಾಗಲೂ ಮುಂಬಾಗಿಲಿನಿಂದ ಬರುವವರೇ ಹೊರತು ಹಿಂಬಾಗಿಲಿನಿಂದ ಬರುವವರಲ್ಲ ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಭಾಷಣದ ಸಂದರ್ಭದಲ್ಲೇ ಶಾಲಾ ವಿದ್ಯಾರ್ಥಿಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯಘೋಷ ಹಾಕಿಸಿರುವುದು ಮತ್ತಷ್ಟು ಗಮನ ಸೆಳೆದಿದೆ. ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷದ ವಿರುದ್ಧ ಟೀಕೆ ಹಾಗೂ ವಿದ್ಯಾರ್ಥಿಗಳಿಂದ ರಾಜಕೀಯ ನಾಯಕನ ಪರ ಘೋಷಣೆ ಹಾಕಿಸಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಶಾಸಕರ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಶಾಲಾ ವೇದಿಕೆಯಲ್ಲಿ ರಾಜಕೀಯ ಭಾಷಣ ನಡೆಸಿರುವುದರ ಔಚಿತ್ಯದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.

