ಡೈಲಿವಾರ್ತೆ:06/ಅ./2026

ನಡುರಾತ್ರಿ 2 ಗಂಟೆಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸಚಿವ ಯು.ಟಿ. ಖಾದರ್ ದಿಢೀರ್ ಭೇಟಿ

ರಾಮನಗರ: ಖಾಸಗಿ ಕಾರ್ಯಕ್ರಮದ ನಿಮಿತ್ತ ಚನ್ನಪಟ್ಟಣಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ನಡುರಾತ್ರಿ ಸುಮಾರು 2 ಗಂಟೆ ವೇಳೆಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ ಆರೋಗ್ಯ ಸೇವೆಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.

ಸಚಿವರು ಆಸ್ಪತ್ರೆಯ ಜನರಲ್ ವಾರ್ಡ್, ಐಸಿಯು ಹಾಗೂ ಶೌಚಾಲಯಗಳಿಗೆ ತೆರಳಿ ಅಲ್ಲಿನ ಸ್ವಚ್ಛತೆ ಮತ್ತು ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಸಿಬ್ಬಂದಿಯ ಹಾಜರಾತಿ ದಾಖಲಾತಿಗಳನ್ನು ಪರಿಶೀಲಿಸಿ, ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಯಿಂದ ಆಸ್ಪತ್ರೆಯ ಕಾರ್ಯನಿರ್ವಹಣೆ ಮತ್ತು ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಈ ವೇಳೆ ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಿಗಳನ್ನು ಬಿಟ್ಟು, ಹೊರಗಿನ ಮೆಡಿಕಲ್‌ಗಳಿಗೆ ಔಷಧಿ ಚೀಟಿ ಬರೆಯಲಾಗುತ್ತಿರುವ ವಿಚಾರ ಸಚಿವರ ಗಮನಕ್ಕೆ ಬಂದಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಆಸ್ಪತ್ರೆಯಲ್ಲೇ ಅಗತ್ಯ ಸೌಲಭ್ಯಗಳು ಹಾಗೂ ಔಷಧಿಗಳು ಲಭ್ಯವಿರುವಾಗ ಹೊರಗಡೆ ಔಷಧಿ ಖರೀದಿಸುವಂತೆ ಸಾರ್ವಜನಿಕರಿಗೆ ಸೂಚಿಸುವುದು ಏಕೆ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದರು.
ಸಾರ್ವಜನಿಕ ಆಸ್ಪತ್ರೆಗಳಿಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ರೀತಿಯ ಅನಗತ್ಯ ಆರ್ಥಿಕ ಹೊರೆ ಉಂಟಾಗದಂತೆ ಎಚ್ಚರ ವಹಿಸುವಂತೆ ಸಚಿವರು ಸೂಚಿಸಿದರು. ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು, ರೋಗಿಗಳಿಗೆ ಗುಣಮಟ್ಟದ ಹಾಗೂ ತ್ವರಿತ ಚಿಕಿತ್ಸಾ ಸೇವೆ ಒದಗಿಸಬೇಕು ಎಂದು ವೈದ್ಯರು ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಿದರು.

ತಡರಾತ್ರಿ ನಡೆದ ಸಚಿವರ ದಿಢೀರ್ ಪರಿಶೀಲನೆ ವೇಳೆ ಆಸ್ಪತ್ರೆಯಲ್ಲಿನ ವ್ಯವಸ್ಥೆ, ಸಿಬ್ಬಂದಿ ಹಾಜರಾತಿ ಹಾಗೂ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಸ್ಥಳದಲ್ಲೇ ಮಾಹಿತಿ ಪಡೆದುಕೊಳ್ಳಲಾಯಿತು.