


ಡೈಲಿವಾರ್ತೆ: 23/ನ./2026




ಕಟಪಾಡಿ: ಚಹಾ ಸೇವಿಸಿದ ಬಳಿಕ ಹೃದಯಾಘಾತ – ನಿವೃತ್ತ ಶಿಕ್ಷಕಿ ಡಯಾನ ಡಿ’ಸಿಲ್ವ ನಿಧನ

ಕಟಪಾಡಿ: ಮನೆಯಲ್ಲೇ ಪತಿಯೊಂದಿಗೆ ಚಹಾ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತ ಸಂಭವಿಸಿ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ನ.21ರಂದು ಕಟಪಾಡಿ ಮೂಡಬೆಟ್ಟು ಸರಕಾರಿಗುಡ್ಡೆಯ ಮನೆಯಲ್ಲಿ ನಡೆದಿದೆ.
ಕಾಪು ಉಳಿಯಾರಗೋಳಿಯ ದಂಡತೀರ್ಥ ಶಾಲೆಯ ನಿವೃತ್ತ ಶಿಕ್ಷಕಿ ಡಯಾನ ಡಿ’ಸಿಲ್ವ (63) ಮೃತಪಟ್ಟವರು.
ನ.21ರ ಸಂಜೆ ಮನೆಯಲ್ಲಿ ಪತಿ, ಶಂಕರಪುರ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಜಾರ್ಜ್ ಡಿ’ಸಿಲ್ವ ಅವರೊಂದಿಗೆ ಡಯಾನ ಅವರು ಚಹಾ ಸೇವಿಸಿದ್ದರು. ಚಹಾ ಸೇವನೆ ಬಳಿಕ ಪತಿ ಲೋಟವನ್ನು ಒಳಗಿಡಲು ತೆರಳಿದ ಸಂದರ್ಭದಲ್ಲಿ ಡಯಾನ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಹೃದಯಾಘಾತ ಸಂಭವಿಸಿದೆ. ತಕ್ಷಣ ಪತಿಯನ್ನು ಸಹಾಯಕ್ಕಾಗಿ ಕರೆದಿದ್ದು, ಕೂಡಲೇ ಅವರನ್ನು ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಆದರೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಡಯಾನ ಅವರು ಕಾಪು ಉಳಿಯಾರಗೋಳಿಯ ದಂಡತೀರ್ಥ ಶಾಲೆಯಲ್ಲಿ ಸತತ 33 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಒಂದು ವಾರದ ಹಿಂದೆಯಷ್ಟೇ ಪುತ್ರಿಯ ವಿವಾಹ ಸಮಾರಂಭದಲ್ಲಿ ಕುಟುಂಬದವರೊಂದಿಗೆ ಸಂತಸದಿಂದ ಪಾಲ್ಗೊಂಡಿದ್ದರು.
ಮೃತರು ಪತಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

