ಡೈಲಿವಾರ್ತೆ: 23/ನ./2026

ಕಾಪು ಬೀಚ್‌ನಲ್ಲಿ ಸಮುದ್ರಪಾಲಾಗಿದ್ದ ಇಬ್ಬರ ಪೈಕಿ ಓರ್ವನ ಮೃತದೇಹ ಪತ್ತೆ, ಮತ್ತೋರ್ವ ಬಾಲಕನಿಗಾಗಿ ಮುಂದುವರಿದ ಶೋಧ

ಉಡುಪಿ: ಕಾಪು ಬೀಚ್‌ನಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಇಬ್ಬರು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಓರ್ವನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮತ್ತೋರ್ವ ಬಾಲಕನಿಗಾಗಿ ಕರಾವಳಿ ಕಾವಲು ಹಾಗೂ ಜೀವ ರಕ್ಷಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮೃತನನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ನಿವಾಸಿ ಅಲ್ತಾಫ್ ಅವರ ಪುತ್ರ ಸಮೀರ್ (20) ಎಂದು ಗುರುತಿಸಲಾಗಿದೆ.
ನಾಪತ್ತೆಯಾಗಿರುವ ದಾವಣಗೆರೆಯ ಅಹಮ್ಮದಿ ನಗರದ ನಿವಾಸಿ ಝಿಯಾವುಲ್ಲಾ ಅವರ ಪುತ್ರ ಮಲ್ಲಿಕ್ ರಿಹಾನ್ (15) ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ದಾವಣಗೆರೆಯಿಂದ 12 ಮಂದಿಯ ತಂಡವೊಂದು ಕಾಪು ಬೀಚ್‌ಗೆ ಪ್ರವಾಸಕ್ಕೆ ಬಂದಿತ್ತು. ಈ ಪೈಕಿ ಐವರು ಯುವಕರು ಸಮುದ್ರದಲ್ಲಿ ಈಜಲು ಇಳಿದಿದ್ದರು. ಈ ವೇಳೆ ಸಮುದ್ರದ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಘಟನೆ ಗಮನಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಬೀಚ್‌ನ ಜೀವ ರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರಲ್ಲಿ ಓರ್ವನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಉಳಿದ ಇಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಅವರಿಗಾಗಿ ರವಿವಾರದಿಂದಲೇ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಸೋಮವಾರ ಬೆಳಗ್ಗೆ ಸಮೀರ್ ಅವರ ಮೃತದೇಹ ಪತ್ತೆಯಾಗಿದೆ