


ಡೈಲಿವಾರ್ತೆ: 23/ನ./2026




ಕಲ್ಲಿನ ಆನೆಯ ಕೆಳಗೆ ನುಸುಳಲು ಹೋಗಿ ಸಿಲುಕಿಕೊಂಡ ಭಕ್ತ: ಸ್ಥಳೀಯರಿಂದ ರಕ್ಷಣೆ (ವಿಡಿಯೋ ವೈರಲ್)

ಮಧ್ಯಪ್ರದೇಶ: ಹರಕೆ ತೀರಿಸುವ ನಂಬಿಕೆಯ ಹಿನ್ನೆಲೆಯಲ್ಲಿ ಕಲ್ಲಿನ ಆನೆಯ ಮೂರ್ತಿಯ ಕೆಳಭಾಗದಿಂದ ಹಾದುಹೋಗಲು ಪ್ರಯತ್ನಿಸಿದ ಭಕ್ತನೊಬ್ಬ, ಕಿರಿದಾದ ಜಾಗದಲ್ಲಿ ಸಿಲುಕಿಕೊಂಡು ಕೆಲಕಾಲ ಪರದಾಡಿದ ಘಟನೆ ಮಧ್ಯಪ್ರದೇಶದ ಅಮರಕಂಟಕ್ನ ಪ್ರಸಿದ್ಧ ಮಾ ನರ್ಮದಾ ದೇವಾಲಯದಲ್ಲಿ ನಡೆದಿದೆ.
ದೇವಾಲಯದ ಆವರಣದಲ್ಲಿರುವ ಕಲ್ಲಿನ ಆನೆಯ ಕಾಲುಗಳ ನಡುವಿನ ಕಿರಿದಾದ ಜಾಗದಲ್ಲಿ ನುಸುಳಲು ಯತ್ನಿಸಿದ ಭಕ್ತ, ಅರ್ಧದಲ್ಲೇ ಸಿಲುಕಿಕೊಂಡಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ಮುಂದಕ್ಕೆ ಸಾಗಲು ಸಾಧ್ಯವಾಗದೆ, ಹಿಂದಕ್ಕೂ ಹಿಂತಿರುಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದನ್ನು ಗಮನಿಸಿದ ದೇವಾಲಯಕ್ಕೆ ಆಗಮಿಸಿದ್ದ ಇತರ ಭಕ್ತರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಸ್ಥಳೀಯರು ಸೂಚಿಸಿದ ರೀತಿಯಲ್ಲಿ ಎಚ್ಚರಿಕೆಯಿಂದ ಪ್ರಯತ್ನಿಸಿದ ಬಳಿಕ ಭಕ್ತನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಕೈಗೊಳ್ಳುವ ಇಂತಹ ಸಾಹಸಗಳ ಕುರಿತು ಚರ್ಚೆಗೆ ಕಾರಣವಾಗಿವೆ.
ಕಲ್ಲಿನ ಆನೆಯ ಕೆಳಗೆ ಹಾದುಹೋದರೆ ಪಾಪ ಪರಿಹಾರ ಎಂಬ ನಂಬಿಕೆ:
ಅನುಪ್ಪುರ್ ಜಿಲ್ಲೆಯ ಅಮರಕಂಟಕ್ನಲ್ಲಿರುವ ಮಾ ನರ್ಮದಾ ದೇವಾಲಯದ ಆವರಣದಲ್ಲಿರುವ ಕಲ್ಲಿನ ಆನೆಯ ಕೆಳಭಾಗದಿಂದ ಹಾದುಹೋದರೆ ಪಾಪಗಳು ನಿವಾರಣೆಯಾಗುತ್ತವೆ ಹಾಗೂ ದುಷ್ಟಶಕ್ತಿಗಳ ಪ್ರಭಾವ ದೂರವಾಗುತ್ತದೆ ಎಂಬ ಸ್ಥಳೀಯ ಧಾರ್ಮಿಕ ಪ್ರತೀತಿ ಇದೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಭಕ್ತರು ಆನೆಯ ಕಾಲುಗಳ ನಡುವಿನ ಕಿರಿದಾದ ಜಾಗದಲ್ಲಿ ಹಾದುಹೋಗಲು ಪ್ರಯತ್ನಿಸುತ್ತಾರೆ. ಇದೇ ರೀತಿಯ ಪ್ರಯತ್ನದ ವೇಳೆ ಈ ಹಿಂದೆಯೂ, 2022ರ ಡಿಸೆಂಬರ್ನಲ್ಲಿ ಮತ್ತೊಬ್ಬರು ಸಿಲುಕಿಕೊಂಡ ಘಟನೆ ವರದಿಯಾಗಿತ್ತು.
ಐತಿಹಾಸಿಕ ಹಿನ್ನೆಲೆಯ ನರ್ಮದಾ ದೇವಾಲಯ:
ನರ್ಮದಾ ನದಿಯ ಉಗಮಸ್ಥಾನವಾಗಿರುವ ಅಮರಕಂಟಕ್ನಲ್ಲಿರುವ ಈ ದೇವಾಲಯವನ್ನು ನರ್ಮದಾ ಉಗಮ ದೇವಾಲಯ ಎಂದೂ ಕರೆಯಲಾಗುತ್ತದೆ. 11ನೇ ಶತಮಾನದಲ್ಲಿ ಕಲಚುರಿ ರಾಜವಂಶದ ಮಹಾರಾಜ ಕರ್ಣದೇವ ಈ ದೇವಾಲಯವನ್ನು ನಿರ್ಮಿಸಿದ್ದು, ಬಳಿಕ ನಾಗಪುರದ ಭೋಂಸ್ಲೆ ಅರಸರು ಹಾಗೂ ಇಂದೋರ್ನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಕಾಲದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂಬ ಐತಿಹಾಸಿಕ ಉಲ್ಲೇಖಗಳಿವೆ.
ನರ್ಮದಾ ಜಯಂತಿ ಹಾಗೂ ಮಹಾಶಿವರಾತ್ರಿ ಸೇರಿದಂತೆ ಪ್ರಮುಖ ಧಾರ್ಮಿಕ ಸಂದರ್ಭಗಳಲ್ಲಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಧಾರ್ಮಿಕ ನಂಬಿಕೆಗಳ ಆಚರಣೆಯ ಸಂದರ್ಭದಲ್ಲಿ ಸುರಕ್ಷತೆಗೆ ಆದ್ಯತೆ ನೀಡುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

