ಡೈಲಿವಾರ್ತೆ:07/ಅ./2026

ಸಾಲಿಗ್ರಾಮ: ‘ಆಚಾರ್’ ಪದದ ನೆಪದಲ್ಲಿ ಸಾಹಿತಿ ಹೆಬ್ಬಾರ್ ಅವಮಾನಕ್ಕೆ ಬ್ರಾಹ್ಮಣ ಸಮಾಜ ಕೆಂಡಾಮಂಡಲ: ಬಹಿರಂಗ ಕ್ಷಮೆಯಾಚನೆಗೆ ಆಗ್ರಹ

ಕೋಟ: ಅ.8: ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಹಾಸ್ಯಮಯ ಸಂದರ್ಭದಲ್ಲಿ ಬಳಸಿದ ‘ಆಚಾರ್’ ಎಂಬ ಪದವನ್ನು ಮುಂದಿಟ್ಟುಕೊಂಡು ವಿಶ್ವಕರ್ಮ ಸಮಾಜದ ವತಿಯಿಂದ ಅವರನ್ನು ಅವಮಾನಿಸಲಾಗಿದೆ ಎಂಬ ಆರೋಪಕ್ಕೆ ಇದೀಗ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಬ್ಬಾರ್ ಅವರ ಪರವಾಗಿ ಧ್ವನಿ ಎತ್ತಿರುವ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭೆ ಸೇರಿದಂತೆ ವಿವಿಧ ಬ್ರಾಹ್ಮಣ ಸಂಘಟನೆಗಳು, ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗುರುವಾರ ಸಾಲಿಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭೆ ಜಿಲ್ಲಾಧ್ಯಕ್ಷ ಸಂದೀಪ್ ಕುಮಾರ್ ಮಂಜ, ‘ಆಚಾರ್’ ಎಂಬುದು ನಿರ್ದಿಷ್ಟ ಜಾತಿಯನ್ನು ಸೂಚಿಸುವ ಪದವಲ್ಲ. ಬ್ರಾಹ್ಮಣರು ಸೇರಿದಂತೆ ವಿವಿಧ ಸಮುದಾಯಗಳಲ್ಲಿಯೂ ಈ ಪದ ಬಳಕೆಯಲ್ಲಿದೆ. ಹೀಗಿರುವಾಗ ಒಂದು ಪದದ ಬಳಕೆಯನ್ನು ಮುಂದಿಟ್ಟುಕೊಂಡು ಹೆಬ್ಬಾರ್ ಅವರನ್ನು ಸಭೆಗೆ ಆಹ್ವಾನಿಸಿ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಎ.ಎಸ್.ಎನ್. ಹೆಬ್ಬಾರ್ ಅವರಿಗೆ ಮಾಡಿದ ಅವಮಾನ ಇಡೀ ಬ್ರಾಹ್ಮಣ ಸಮಾಜಕ್ಕೆ ನೋವುಂಟು ಮಾಡಿದೆ ಎಂದು ಹೇಳಿದ ಅವರು, ಬ್ರಾಹ್ಮಣ ಸಮಾಜದ ವಿರುದ್ಧ ನಿರಂತರವಾಗಿ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಬೆಳವಣಿಗೆಯನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭೆ ತೀವ್ರವಾಗಿ ಖಂಡಿಸುತ್ತದೆ ಎಂದರು. ಹೆಬ್ಬಾರ್ ಅವರನ್ನು ಸಭೆಗೆ ಆಹ್ವಾನಿಸಿ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ, ಸಭೆ ಆಯೋಜಿಸಿದವರು ಬ್ರಾಹ್ಮಣ ಸಮಾಜದ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಸಂದೀಪ್ ಕುಮಾರ್ ಮಂಜ ಆಗ್ರಹಿಸಿದರು. ತಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಈ ವಿಚಾರದಲ್ಲಿ ಸಮಾಜದ ವತಿಯಿಂದ ಕಾನೂನು ಹೋರಾಟ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಎಚ್ಚರಿಸಿದರು.

ಬ್ರಾಹ್ಮಣ ಸಮಾಜದ ಪ್ರಮುಖ ರಾಜಶೇಖರ್ ಹೆಬ್ಬಾರ್ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ವಿವಿಧ ಸಮುದಾಯಗಳು ಪರಸ್ಪರ ಸೌಹಾರ್ದದಿಂದ ಬದುಕುತ್ತಿರುವ ಪರಂಪರೆ ಇದೆ. ಜಾತಿ ಸಂಘರ್ಷಕ್ಕೆ ಅವಕಾಶ ನೀಡದೆ ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸಾಗುತ್ತಿರುವ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಅನಗತ್ಯ ವಿವಾದಕ್ಕೆ ಕಾರಣವಾಗಬಹುದು ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಈ ನಡೆ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಬಾರದಂತೆ ವಿವಾದಗಳನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದರು.

ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಪಿ.ಸಿ. ಹೊಳ್ಳ ಸೇರಿದಂತೆ ಬ್ರಾಹ್ಮಣ ಸಮಾಜದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಚಂದ್ರಶೇಖರ ಉಪಾಧ್ಯ ಚಿತ್ರಪಾಡಿ, ಪಟ್ಟಾಭಿರಾಮ ಸೋಮಯಾಜಿ, ಅಶೋಕ್ ಭಟ್ ಬ್ರಹ್ಮಾವರ, ಆನಂತಪದ್ಮನಾಭ ವಾಕುಡ, ಶ್ರೀಪತಿ ಅಧಿಕಾರಿ, ರಾಮನಾಥ ಅಲ್ಸೆ ಹಾಗೂ ಶಿವರಾಮ ಉಡುಪ ಮತ್ತಿತರರು ಭಾಗವಹಿಸಿದ್ದರು.
ರಾಜಾರಾಮ್ ಐತಾಳ ಸ್ವಾಗತಿಸಿ, ವಂದಿಸಿದರು.