ಡೈಲಿವಾರ್ತೆ:10/ಅ./2026

ವಕ್ವಾಡಿಯಲ್ಲಿ ಮಣ್ಣು ಸಾಗಾಟದ ವಿವಾದ – ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯ ಮೇಲೆ ಹಲ್ಲೆ! ಬಿಡಿಸಲು ಬಂದ ಪತ್ನಿ, ಅಕ್ಕ ಹಾಗೂ ಮಗನಿಗೂ ದೌರ್ಜನ್ಯ!

ಕುಂದಾಪುರ: ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದನ್ನು ಪ್ರಶ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಅವರ ಮಗನಿಗೂ ಹಲ್ಲೆ ಮಾಡಿದ್ದಲ್ಲದೆ, ಬಿಡಿಸಲು ಬಂದ ಪತ್ನಿ ಹಾಗೂ ಅಕ್ಕನನ್ನು ದೂಡಿ ಹಾಕಿರುವ ಆರೋಪದಡಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ಕಲ್ಸಂಕ ತೋಡಿನ ಸಮೀಪ ಅ.8ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ವಕ್ವಾಡಿ ಗ್ರಾಮದ ನಿವಾಸಿ ಸತ್ಯರಂಜನ್ ಹೆಗ್ಡೆ (62) ಅವರ ಅಕ್ಕ ಪ್ರೇಮಲತಾ ಎಸ್. ಶೆಟ್ಟಿ ಅವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸತ್ಯರಂಜನ್ ಹೆಗ್ಡೆ ಅವರು ತುರ್ತು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಈ ವಿಚಾರವಾಗಿ ಮಾತನಾಡುತ್ತಿದ್ದ ವೇಳೆ ಆರೋಪಿ ಸಂಪತ್ ಕುಮಾರ್ ಏಕಾಏಕಿ ಕಾರಿನಲ್ಲಿ ಸ್ಥಳಕ್ಕೆ ಬಂದು, ಸತ್ಯರಂಜನ್ ಹೆಗ್ಡೆ ಅವರ ಕಾಲರ್ ಹಿಡಿದು ತಡೆದು ನಿಲ್ಲಿಸಿ ಮುಖಕ್ಕೆ ಕೈಯಿಂದ ಗುದ್ದಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಸತ್ಯರಂಜನ್ ಹೆಗ್ಡೆ ಅವರ ಮಗ ಸಾತ್ವಿಕ್ ಅವರನ್ನೂ ಹಿಡಿದು ಕೈಯಿಂದ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಈ ವೇಳೆ ಹಲ್ಲೆಯನ್ನು ತಡೆಯಲು ಮುಂದಾದ ಸತ್ಯರಂಜನ್ ಅವರ ಪತ್ನಿ ಚಂದ್ರವಳಿ ಎಸ್. ಹೆಗ್ಡೆ ಹಾಗೂ ಅಕ್ಕ ಪ್ರೇಮಲತಾ ಶೆಟ್ಟಿ ಅವರನ್ನು ದೂಡಿ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಆರೋಪಿಯೊಂದಿಗೆ ಇದ್ದ ಕೆಲಸಗಾರನೂ ಸತ್ಯರಂಜನ್ ಹೆಗ್ಡೆ ಅವರನ್ನು ದೂಡಿದ್ದಾನೆ ಎನ್ನಲಾಗಿದೆ. ಬಳಿಕ ಆರೋಪಿಯು ಸತ್ಯರಂಜನ್ ಹೆಗ್ಡೆ ಅವರಿಗೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಆಧಾರದಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 115(2), 352, 351(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.