ಡೈಲಿವಾರ್ತೆ:10/ಅ./2026

ನಾಡೋಜ ಡಾ. ಜಿ. ಶಂಕರ್‌ರಿಂದ ಉಚ್ಚಿಲ ದಸರಾ ವಿದ್ಯುದ್ದೀಪಾಲಂಕಾರ ಉದ್ಘಾಟನೆ:
ಬೆಳಕಿನ ವೈಭವದಲ್ಲಿ ಕಂಗೊಳಿಸಿದ ಉಚ್ಚಿಲ; ದಸರಾ ಮಹೋತ್ಸವಕ್ಕೆ ವಿದ್ಯುದ್ದೀಪಾಲಂಕಾರದ ಮೆರುಗು

ಉಚ್ಚಿಲ, ಅ. 10: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅ. 11ರಿಂದ 21ರವರೆಗೆ ನಡೆಯಲಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ-2026 ಉತ್ಸವಕ್ಕೆ ವಿದ್ಯುದ್ದೀಪಾಲಂಕಾರದ ವೈಭವ ಮತ್ತಷ್ಟು ಮೆರುಗು ನೀಡಿದೆ. ದೇವಸ್ಥಾನದ ಪರಿಸರದಿಂದ ಪಡುಬಿದ್ರಿ ಮೂಲಕ ಕಾಪು ಸಮುದ್ರ ತೀರದವರೆಗೆ ನಿರ್ಮಿಸಲಾಗಿರುವ ಆಕರ್ಷಕ ವಿದ್ಯುದ್ದೀಪಾಲಂಕಾರವನ್ನು ದಸರಾ ರೂವಾರಿ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರು ಶನಿವಾರ (ಅ. 10) ಸಂಜೆ ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ.ವಿ. ರಾಘವೇಂದ್ರ ಉಪಾಧ್ಯಾಯ ಮತ್ತು ಶ್ರೀನಿವಾಸ ಉಪಾಧ್ಯಾಯ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ವಿದ್ಯುದ್ದೀಪಾಲಂಕಾರದ ಗುತ್ತಿಗೆದಾರ ಅನಿಲ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ದಸರಾ ಸಂಭ್ರಮಕ್ಕೆ ವಿದ್ಯುತ್‌ ದೀಪಗಳ ಕಳೆ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪರಿಸರದಿಂದ ಪಡುಬಿದ್ರಿ ಮಾರ್ಗವಾಗಿ ಕಾಪು ಸಮುದ್ರ ತೀರದವರೆಗೆ ನಿರ್ಮಿಸಲಾಗಿರುವ ವಿದ್ಯುದ್ದೀಪಾಲಂಕಾರ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ದಸರಾ ಉತ್ಸವದ ಅಂಗವಾಗಿ ಕೈಗೊಂಡಿರುವ ಈ ವಿಶೇಷ ಅಲಂಕಾರವು ಉತ್ಸವದ ಸಂಭ್ರಮಕ್ಕೆ ಹೊಸ ಕಳೆ ನೀಡಿದ್ದು, ಸ್ಥಳೀಯರು ಹಾಗೂ ಭಕ್ತಾಭಿಮಾನಿಗಳಲ್ಲಿ ವಿಶೇಷ ಆಕರ್ಷಣೆ ಮೂಡಿಸಿದೆ.
ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಕ್ತಾಭಿಮಾನಿಗಳು ಹಾಗೂ ಮೊಗವೀರ ಸಮಾಜದ ಸಹಕಾರ ಮತ್ತು ಸಹಯೋಗದೊಂದಿಗೆ ಈ ಬಾರಿಯ ಉಚ್ಚಿಲ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.

ಗಣ್ಯರ ಉಪಸ್ಥಿತಿ

ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ-ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮೋಹನ್ ಬೇಂಗ್ರೆ, ಶ್ರೀಪತಿ ಭಟ್ ಉಚ್ಚಿಲ, ದಿನೇಶ್ ಎರ್ಮಾಳು, ಮನೋಜ್ ಕಾಂಚನ್, ಸತೀಶ್ ಕುಂದರ್ ಮಲ್ಪೆ, ವಾಸುದೇವ ಸಾಲ್ಯಾನ್, ಗುಂಡು ಬಿ. ಅಮೀನ್, ರತ್ನಾಕರ ಸಾಲ್ಯಾನ್ ಮಲ್ಪೆ ಹಾಗೂ ವಿಶ್ವಾಸ್ ಅಮೀನ್ ಉಪಸ್ಥಿತರಿದ್ದರು.