



ಡೈಲಿವಾರ್ತೆ:11/ಅ./2026

ಸಿಜೆಪಿ ನಾಯಕರು ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ ಬಿಡುಗಡೆ: ಒಂದು ವರ್ಷ ಶಾಂತಿ ಕಾಪಾಡಲು ಷರತ್ತು!

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಕರೆ ನೀಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಬಿಡುಗಡೆ ಮಾಡಲಾಗಿದೆ. ಒಂದು ವರ್ಷದ ಅವಧಿಗೆ ಶಾಂತಿ ಕಾಪಾಡುವುದು ಮತ್ತು ಉತ್ತಮ ನಡತೆ ಕಾಯ್ದುಕೊಳ್ಳುವ ಷರತ್ತಿನೊಂದಿಗೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂವರ ಬಿಡುಗಡೆಗೆ ಆದೇಶಿಸಿದೆ.
ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದ್ದ ಅವರನ್ನು ಕಾನೂನು ಪ್ರಕ್ರಿಯೆಯಂತೆ ದೆಹಲಿ ಕಂಟೋನ್ಮೆಂಟ್‌ನ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ವಿಚಾರಣೆ ವೇಳೆ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಶಾಂತಿ ಭಂಗ ಉಂಟುಮಾಡದಂತೆ ಹಾಗೂ ಉತ್ತಮ ನಡತೆ ಕಾಪಾಡಿಕೊಳ್ಳುವಂತೆ ಷರತ್ತು ವಿಧಿಸಲಾಯಿತು. ತಲಾ ₹50,000 ಮೊತ್ತದ ಶ್ಯೂರಿಟಿ ಬಾಂಡ್ ಸಲ್ಲಿಸಿದ ಬಳಿಕ ಮೂವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ ಸುದ್ದಿಗೋಷ್ಠಿ:
ಬಿಡುಗಡೆಯ ಬಳಿಕ ಪ್ರತಿಕ್ರಿಯಿಸಿರುವ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, ಶನಿವಾರ ಮಧ್ಯಾಹ್ನ 2 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಘಟನೆಯ ಕುರಿತು ವಿವರಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ. ಪ್ರತಿಭಟನೆಗೆ ಮುನ್ನವೇ ಪಕ್ಷದ ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
SIR ಅಕ್ರಮ ಆರೋಪ; ಸಿಜೆಪಿ ಪ್ರತಿಭಟನೆಗೆ ಕರೆ:
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಸಿಜೆಪಿ ನಾಯಕರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದ ಪೊಲೀಸರು, ಮುಂಬೈನಿಂದ ದೆಹಲಿಗೆ ಆಗಮಿಸಿದ್ದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ವಿಮಾನದೊಳಗೇ ವಶಕ್ಕೆ ಪಡೆದಿದ್ದರು.
ಪ್ರತಿಭಟನೆಗೆ ಸಂಬಂಧಿಸಿದಂತೆ ನಾಯಕರನ್ನು ವಶಕ್ಕೆ ಪಡೆದ ಕ್ರಮ ಹಾಗೂ ಬಿಡುಗಡೆ ವೇಳೆ ವಿಧಿಸಲಾದ ಷರತ್ತುಗಳು ಇದೀಗ ಸಿಜೆಪಿ ಮುಂದಿನ ಹೋರಾಟದ ನಡೆ ಕುರಿತು ಕುತೂಹಲ ಮೂಡಿಸಿವೆ.