ಮಣಿಕಲ್ಲು ಶ್ರೀ ಮಹಾದೇವಿ ಅಬ್ಬಗ ಧಾರಗ ದೇವಸ್ಥಾನದಲ್ಲಿ ಅ.11ರಿಂದ ಶರನ್ನವರಾತ್ರಿ ಮಹೋತ್ಸವ

ಅ. 21ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳು, ಸಾಮೂಹಿಕ ಚಂಡಿಕಾ ಹೋಮ, ರಂಗಪೂಜೆ ಹಾಗೂ ಅನ್ನಸಂತರ್ಪಣೆ

ಉಡುಪಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಣಿಕಲ್ಲು ಶ್ರೀ ಮಹಾದೇವಿ ಅಬ್ಬಗ ಧಾರಗ ಸಪರಿವಾರ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವು ಅ. 11ರಿಂದ ಅ. 21ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಲಿದೆ.

ಶಾಲಿವಾಹನ ಶಕ 1949ರ ಪರಾಭವ ನಾಮ ಸಂವತ್ಸರದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರಥಮ ದಿನವಾದ ಅ. 11ರ ಭಾನುವಾರ ಆರಂಭವಾಗಿರುವ ಮಹೋತ್ಸವವು, ಆಶ್ವಯುಜ ಶುದ್ಧ ಮಹಾನವಮಿಯಾದ ಅ. 21ರ ಮಂಗಳವಾರದವರೆಗೆ ನಡೆಯಲಿದೆ.
ಈ ಅವಧಿಯಲ್ಲಿ ಕ್ಷೇತ್ರದ ಧಾರ್ಮಿಕ ಪರಂಪರೆ ಹಾಗೂ ಸತ್‌ಸಂಪ್ರದಾಯಗಳಿಗೆ ಅನುಗುಣವಾಗಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಮಹೋತ್ಸವದ ಅಂಗವಾಗಿ ಪ್ರತಿದಿನ ರುದ್ರಪೂಜೆ, ಲಲಿತಾ ಸಹಸ್ರನಾಮ ಪಾರಾಯಣ, ಚಂಡಿಕಾ ಪಾರಾಯಣ, ವೇದ ಪಾರಾಯಣ, ರಂಗಪೂಜೆ, ದುರ್ಗಾನಮಸ್ಕಾರ, ಅಷ್ಟಾವಧಾನ ಸೇವೆ, ಕಳಶಾಭಿಷೇಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಪ್ರತಿದಿನ ಅನ್ನಸಂತರ್ಪಣೆಯೂ ನಡೆಯಲಿದ್ದು, ಭಕ್ತಾದಿಗಳಿಗೆ ಅಮ್ಮನವರ ಗಂಧಪ್ರಸಾದ ಸ್ವೀಕರಿಸುವ ಅವಕಾಶ ಕಲ್ಪಿಸಲಾಗಿದೆ.
ಕ್ಷೇತ್ರದಲ್ಲಿ ದುರ್ಗಾಪಾರಾಯಣ ನೆರವೇರಿಸಲು ಇಚ್ಛಿಸುವ ಭಕ್ತರು ಹಾಗೂ ಸಾಮೂಹಿಕ ಚಂಡಿಕಾ ಹೋಮಕ್ಕೆ ಫಲ ಸಮರ್ಪಣೆ ಮತ್ತು ರಂಗಪೂಜೆ ಸೇವೆ ಸಲ್ಲಿಸಲು ಬಯಸುವವರು ಮುಂಚಿತವಾಗಿ ದೇವಸ್ಥಾನದ ಸೇವಾ ಕೌಂಟರ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಶರನ್ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆ ಆಗಮಿಸಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ತನು, ಮನ ಹಾಗೂ ಧನದ ಮೂಲಕ ಸಹಕರಿಸಬೇಕು. ಶ್ರೀ ಅಮ್ಮನವರ ದರ್ಶನ ಪಡೆದು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುವ ಮೂಲಕ ತಾಯಿಯ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಮಹೋತ್ಸವಕ್ಕೆ ಬಿಲ್ಲಾಡಿ ಮನೆ ಹಾಗೂ ನೈಲಾಡಿ ಮನೆಯವರು, ಶ್ರೀ ಮಹಾದೇವಿ ಅಬ್ಬಗ ಧಾರಗ ದೇವಸ್ಥಾನದ ಪ್ರಧಾನ ಅರ್ಚಕರು, ಸಿಬ್ಬಂದಿ ವರ್ಗ ಹಾಗೂ ಆತ್ಮೀಯ ಭಗವದ್ಭಕ್ತರು ಸರ್ವರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.