ಡೈಲಿವಾರ್ತೆ:12/ಅ./2026

ಇಂಡಿಗೋ ವಿಮಾನದ ಪ್ರಯಾಣಿಕರ ಲಗೇಜ್‌ನಲ್ಲೇ ಪವರ್ ಬ್ಯಾಂಕ್ ಸ್ಫೋಟ: ದೆಹಲಿ-ಚೆನ್ನೈ ವಿಮಾನ ಹೈದರಾಬಾದ್‌ಗೆ ಡೈವರ್ಟ್

ನವದೆಹಲಿ, ಅ.12: ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನವೊಂದರಲ್ಲಿ ಪ್ರಯಾಣಿಕರ ಲಗೇಜ್‌ನಲ್ಲಿದ್ದ ಪವರ್ ಬ್ಯಾಂಕ್ ಏಕಾಏಕಿ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ. ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ಸಂಭವಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಹೈದರಾಬಾದ್‌ಗೆ ತಿರುಗಿಸಿ ತುರ್ತು ಭೂಸ್ಪರ್ಶ ಮಾಡಿಸಲಾಗಿದೆ.

ವಿಮಾನವು ಹಾರಾಟದಲ್ಲಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರ ಲಗೇಜ್‌ನಲ್ಲಿದ್ದ ಪವರ್ ಬ್ಯಾಂಕ್‌ನಿಂದ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇದರಿಂದ ವಿಮಾನದೊಳಗೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಿಮಾನ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಕೆಲ ಪ್ರಯಾಣಿಕರೂ ಸಹಕಾರ ನೀಡಿದ್ದು, ತ್ವರಿತವಾಗಿ ಕೈಗೊಂಡ ಕ್ರಮಗಳಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದನ್ನು ತಡೆಯಲು ಸಾಧ್ಯವಾಯಿತು ಎಂದು ವರದಿಯಾಗಿದೆ.

ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ದೆಹಲಿಯಿಂದ ಚೆನ್ನೈಗೆ ತೆರಳುತ್ತಿದ್ದ ವಿಮಾನದ ಮಾರ್ಗವನ್ನು ಬದಲಾಯಿಸಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಗಿದೆ. ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಬಳಿಕ ಪ್ರಯಾಣಿಕರು ನಿರಾಳರಾದರು.

ವಿಮಾನದಲ್ಲಿ ಪವರ್ ಬ್ಯಾಂಕ್‌ನಿಂದ ಬೆಂಕಿ ಕಾಣಿಸಿಕೊಂಡ ಘಟನೆ, ವಿಮಾನ ಪ್ರಯಾಣದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಸುರಕ್ಷಿತ ಬಳಕೆ ಹಾಗೂ ಅವುಗಳನ್ನು ಸಾಗಿಸುವ ನಿಯಮಗಳ ಕುರಿತು ಮತ್ತೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಘಟನೆಯ ನಿಖರ ಕಾರಣ ಮತ್ತು ಹಾನಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.