



ಡೈಲಿವಾರ್ತೆ:12/ಅ./2026

ಕಾರ್ಕಡ ಗೆಳೆಯರ ಬಳಗದಿಂದ ರಾಮ ಮೊಗವೀರರಿಗೆ ಕಾರಂತ ಪುರಸ್ಕಾರ:
ಕಾರಂತರ ಜನ್ಮದಿನಾಚರಣೆ, ಸಾಧಕರಿಂದ ಸ್ಮರಣೆ; ಅವರ ಬದುಕು, ಚಿಂತನೆಗಳ ಅನಾವರಣ

ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯ, ಕಲೆ, ವಿಜ್ಞಾನ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ಚೇತನ. ಅವರ ಬದುಕು, ಬರಹಗಳು ಮತ್ತು ವೈಚಾರಿಕ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ, ಉದ್ಯಮಿ ಆನಂದ ಸಿ. ಕುಂದರ್ ಹೇಳಿದರು.

ಕಾರ್ಕಡ ಗೆಳೆಯರ ಬಳಗದ ಆಶ್ರಯದಲ್ಲಿ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆದ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಹಾಗೂ ಗೆಳೆಯರ ಬಳಗ ಕಾರಂತ ಪುರಸ್ಕಾರ–2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರಂತರು ವಿಶ್ವವ್ಯಾಪಿ ಖ್ಯಾತಿ ಗಳಿಸಿದ ನಡೆದಾಡುವ ವಿಶ್ವಕೋಶ ಹಾಗೂ ಕಡಲ ತಡಿಯ ಭಾರ್ಗವ ಎಂದೇ ಪ್ರಸಿದ್ಧರಾಗಿದ್ದರು. ಅವರ ಬರಹಗಳು ಎಲ್ಲರಿಗೂ ಅರ್ಥವಾಗುವ ಸರಳ ಶೈಲಿಯಲ್ಲಿರುತ್ತಿದ್ದವು. ಯಾವುದೇ ಕೃತಿ ರಚಿಸುವ ಮೊದಲು ವಿಷಯದ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಆಳವಾದ ಅಧ್ಯಯನದೊಂದಿಗೆ ಬರೆಯುತ್ತಿದ್ದರು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗೌರವ ತಂದುಕೊಟ್ಟ ಕಾರಂತರು, ತಮ್ಮನ್ನು ನಂಬಿದವರನ್ನು ಎಂದಿಗೂ ಮರೆಯದ ವ್ಯಕ್ತಿತ್ವ ಹೊಂದಿದ್ದರು ಎಂದು ಸ್ಮರಿಸಿದರು.
ಕಾರಂತರ ಬದುಕು ಸಮಾಜಕ್ಕೆ ಸ್ಫೂರ್ತಿ: ಪ್ರಕಾಶ್ ಕಾರಂತ

ಕಾರಂತ ಪುರಸ್ಕಾರ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಕಾರಂತ ಮಾತನಾಡಿ, ವ್ಯಕ್ತಿಯ ಬದುಕು ಎಷ್ಟು ದೀರ್ಘವಾಗಿತ್ತು ಎನ್ನುವುದಕ್ಕಿಂತ ಅದು ಎಷ್ಟು ಜನರಿಗೆ ಬೆಳಕಾಯಿತು ಎಂಬುದು ಮುಖ್ಯ. ಈ ದೃಷ್ಟಿಯಿಂದ ಕಾರಂತರ ಜೀವನ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
ಕಾರಂತರು ಕೇವಲ ಸಾಹಿತಿಯಲ್ಲ; ಸಾಹಿತ್ಯ, ವಿಜ್ಞಾನ, ಕಲೆ, ಸಂಸ್ಕೃತಿ ಹಾಗೂ ಯಕ್ಷಗಾನ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಬಹುಮುಖ ಪ್ರತಿಭೆಯ ಸಾಧಕರಾಗಿದ್ದರು. ಜ್ಞಾನವನ್ನು ಸಂಪಾದಿಸುವುದಷ್ಟೇ ಅಲ್ಲ, ಅದನ್ನು ಸಮಾಜದ ಒಳಿತಿಗಾಗಿ ಹಂಚಬೇಕು. ಪರಂಪರೆಯನ್ನು ಗೌರವಿಸುವುದರ ಜೊತೆಗೆ ವಿವೇಕದಿಂದ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಅವರ ಚಿಂತನೆಗಳು ಇಂದಿನ ಯುವಜನತೆಗೆ ಸ್ಫೂರ್ತಿಯಾಗಿವೆ ಎಂದು ಹೇಳಿದರು.
ಸಾಲಿಗ್ರಾಮದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವಲ್ಲಿ ಕಾರಂತರ ಕೊಡುಗೆ ಮಹತ್ವದ್ದಾಗಿದೆ. ಗುರುನರಸಿಂಹ ದೇವಸ್ಥಾನದ ಸೌಲಭ್ಯಗಳು ಸಮಾಜದ ಎಲ್ಲ ವರ್ಗಗಳಿಗೂ ಮುಕ್ತವಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬೇಕು ಎಂಬುದು ಆಡಳಿತ ಮಂಡಳಿಯ ಆಶಯವಾಗಿದೆ ಎಂದರು. ತಾರಾನಾಥ ಹೊಳ್ಳ ಅವರ ನೇತೃತ್ವದಲ್ಲಿ ಗೆಳೆಯರ ಬಳಗ ಆಯೋಜಿಸಿರುವ ಕಾರಂತ ಪುರಸ್ಕಾರ ಹಾಗೂ ಸಂಸ್ಮರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.
ಸಂಸ್ಕಾರವಿಲ್ಲದ ಶಿಕ್ಷಣ ಅಪಾಯಕಾರಿ: ಪ್ರದೀಪ್ ಕುಮಾರ್ ಕಲ್ಕೂರ

ಕಲ್ಕೂರ ಪ್ರತಿಷ್ಠಾನದ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ನಮ್ಮ ಬದುಕಿಗೆ ದಾರಿದೀಪವಾದ ಮಹಾನ್ ಸಾಧಕರಲ್ಲಿ ಕೋಟ ಶಿವರಾಮ ಕಾರಂತರು ಪ್ರಮುಖರು. ಇಂದಿನ ಸಮಾಜದಲ್ಲಿ ಶ್ರಮಜೀವನದ ಮೌಲ್ಯಗಳು ಮರೆಯಾಗುತ್ತಿದ್ದು, ಜನರು ಸುಖದ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಸಂಸ್ಕಾರ ಮರೆಯುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದರು.
ತಂದೆಯ ಅಂತ್ಯಸಂಸ್ಕಾರದ ಕುರಿತು ದೂರವಾಣಿ ಮೂಲಕ ವಿಚಾರಿಸುವ ಮಟ್ಟಕ್ಕೆ ಮಕ್ಕಳು ತಲುಪಿರುವುದು ಸಮಾಜದ ಮೌಲ್ಯಗಳ ಕುಸಿತಕ್ಕೆ ಉದಾಹರಣೆ. ಶಿಕ್ಷಣವೆಂದರೆ ಮಕ್ಕಳನ್ನು ಹಣ ಗಳಿಸುವ ಯಂತ್ರಗಳನ್ನಾಗಿ ರೂಪಿಸುವುದಲ್ಲ; ಅವರಲ್ಲಿ ಮಾನವೀಯತೆ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದಾಗಿದೆ. ಕಾರಂತರು ಇಂದು ನಮ್ಮೊಂದಿಗಿದ್ದರೆ, ಶಿಕ್ಷಣ ವ್ಯವಸ್ಥೆ ಹಾಗೂ ಮುಂದಿನ ಪೀಳಿಗೆಯ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಕಾರಂತರ ಬದುಕು ಯುವಜನತೆಗೆ ಪ್ರೇರಣೆ: ಸಂಪತ್ ಕುಮಾರ್ ಶೆಟ್ಟಿ

ವಂಡಾರಿನ ಕೃಷ್ಣಪ್ರಸಾದ್ ಕ್ಯಾಶೂಸ್ ಮಾಲಕ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಕಾರಂತರ ಜೀವನ, ವಿಭಿನ್ನ ಚಿಂತನೆಗಳು ಮತ್ತು ಸತತ ಪ್ರಯತ್ನಗಳು ಇಂದಿನ ಯುವಜನತೆಗೆ ಸ್ಫೂರ್ತಿಯಾಗಿವೆ. ಪ್ರಾಮಾಣಿಕ ಪ್ರಯತ್ನಗಳು ತಕ್ಷಣ ಫಲ ನೀಡದಿದ್ದರೂ, ಮುಂದಿನ ಸಾಧನೆಗೆ ದಾರಿಯಾಗುತ್ತವೆ ಎಂಬುದಕ್ಕೆ ಕಾರಂತರ ಬದುಕೇ ಸಾಕ್ಷಿ ಎಂದರು.
ಕಾರಂತರೊಂದಿಗೆ ನಿಕಟ ಒಡನಾಟ ಹೊಂದಿದ್ದ 94ರ ಹರೆಯದ ರಾಮ ಮೊಗವೀರ ಅವರಿಗೆ ಕಾರಂತ ಪುರಸ್ಕಾರ ಪ್ರದಾನ ಮಾಡಿರುವುದು ಭಾವನಾತ್ಮಕ ಹಾಗೂ ಅರ್ಥಪೂರ್ಣ ಸಂಗತಿ. ಕಾರಂತರ ಊರಿನವರಾಗಿರುವುದು ಹೆಮ್ಮೆಯ ವಿಚಾರವಾಗಿದ್ದು, ಅವರ ಸಾಹಿತ್ಯ ಮತ್ತು ಸಾಧನೆಗಳು ಇಡೀ ನಾಡಿಗೆ ಗೌರವ ತಂದಿವೆ ಎಂದು ಹೇಳಿದರು.
ಕಾರಂತರು ಮುದ್ರಣ ಕ್ಷೇತ್ರದಲ್ಲಿ ಎದುರಿಸಿದ ಸವಾಲುಗಳು ಹಾಗೂ ನಂತರದ ಸಾಹಿತ್ಯಿಕ ಸಾಧನೆಗಳನ್ನು ಸ್ಮರಿಸಿದ ಅವರು, ವಿಫಲತೆಗಳು ಕೂಡ ಹೊಸ ಸಾಧನೆಗಳಿಗೆ ದಾರಿಯಾಗಬಲ್ಲವು ಎಂದರು. ತಾವು ಮುನ್ನಡೆಸುತ್ತಿರುವ ಕೃಷ್ಣಪ್ರಸಾದ್ ಫೌಂಡೇಶನ್ ಮೂಲಕ ತಂದೆಯನ್ನು ಕಳೆದುಕೊಂಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕಾರಂತರ ಜೀವನ ಮತ್ತು ಚಿಂತನೆಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಕಾರಂತರು ಸತ್ಯನಿಷ್ಠೆ, ಶಿಸ್ತಿನ ಪ್ರತೀಕ: ಮುರಳೀ ಕಡೇಕಾರ್

ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳೀ ಕಡೇಕಾರ್ ಮಾತನಾಡಿ, ಕಾರಂತರು ಸಮಯಪಾಲನೆ, ಶಿಸ್ತು ಹಾಗೂ ನಿಷ್ಠುರ ಸತ್ಯನಿಷ್ಠೆಗೆ ಹೆಸರಾಗಿದ್ದರು. ನುಡಿ ಮತ್ತು ನಡೆಯಲ್ಲಿ ಸಾಮ್ಯತೆ ಹೊಂದಿದ್ದ ಅವರು, ಸತ್ಯವೆಂದು ಮನವರಿಕೆಯಾದ ವಿಚಾರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದರು. ಒಮ್ಮೆ ಪರಿಚಯವಾದ ವ್ಯಕ್ತಿಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಗುಣ ಅವರಲ್ಲಿತ್ತು ಎಂದರು.
ಕಾರಂತರ ಬಾಲವನದಲ್ಲಿನ ಕಾರ್ಯಗಳು ಇಂದಿಗೂ ಬೆರಗು ಮೂಡಿಸುತ್ತವೆ. ಅವರ ಸಾಧನೆಗೆ ತಕ್ಕ ಮಾನ್ಯತೆ ದೊರೆತಿಲ್ಲ ಎಂಬ ನೋವಿದ್ದರೂ, ಅವರ ಮಾತೃಹೃದಯ, ಸರಸ್ವತಿಯ ಆರಾಧನೆ ಮತ್ತು ಹಣದ ಮೇಲಿನ ನಿರ್ಲಿಪ್ತತೆ ಅವರನ್ನು ವಿಶಿಷ್ಟ ವ್ಯಕ್ತಿಯನ್ನಾಗಿ ಮಾಡಿದ್ದವು. ಪ್ರಶಸ್ತಿಗಳಿಗಾಗಿ ಹಾತೊರೆಯದ ಕಾರಂತರ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಸ್ಮರಿಸಿದರು.
ರಾಮ ಮೊಗವೀರರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ 94ರ ಹರೆಯದ ರಾಮ ಮೊಗವೀರ ಅವರಿಗೆ ಕಾರಂತ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾರಂತರು ತಮ್ಮನ್ನು ಮನೆಯಲ್ಲಿಯೇ ಸ್ವಂತ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡಿದ್ದರು ಎಂದು ಸ್ಮರಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ ರಾವ್, ಮೈಸೂರಿನ ವೈದ್ಯ ಪುಂಡಲೀಕ ಹೇರ್ಳೆ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯಕ್ಷಗಾನ ವಿಮರ್ಶಕ ಡಾ. ಜಗದೀಶ್ ಶೆಟ್ಟಿ ಸಿದ್ದಾಪುರ, ಕರ್ನಾಟಕ ಬ್ಯಾಂಕ್ ಮಂಗಳೂರು ವಿಭಾಗದ ಮ್ಯಾನೇಜರ್ ಗೋಪಾಲಕೃಷ್ಣ ಸಾಮಗ ಬೆಳ್ಳೆ ಹಾಗೂ ಮಂಗಳೂರಿನ ಕಲಾ ಸಾಹಿತಿ ಜನಾರ್ದನ ಹಂದೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಮಂಜುನಾಥ ಉಪಾಧ್ಯ ಸನ್ಮಾನಪತ್ರ ವಾಚಿಸಿದರು. ಚಂದ್ರಶೇಖರ ನಾವುಡ ಉಲ್ಲಾಸ್ ಕಾರಂತರ ಸಂದೇಶ ವಾಚಿಸಿದರು. ಕಾರ್ಯದರ್ಶಿ ನಾಗರಾಜ ಉಪಾಧ್ಯ ವಂದಿಸಿದರು. ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.