




ಡೈಲಿವಾರ್ತೆ:21/ಅ./2026

ಕೊಡಗು: ಕೆರೆಗೆ ಉರುಳಿದ ಕಾರು – ಪುಟ್ಟ ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರ ದಾರುಣ ಸಾವು

ಸಿದ್ದಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಬಿದ್ದು ದಂಪತಿ ಹಾಗೂ ನಾಲ್ಕು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಬಾಣಂಗಾಲದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಸಿದ್ದಾಪುರದ ಹೈಸ್ಕೂಲ್ ಪೈಸರಿ ನಿವಾಸಿ ವಿಜೇಶ್ (36), ಅವರ ಪತ್ನಿ ಪಮಿತ (34) ಹಾಗೂ ನಾಲ್ಕು ವರ್ಷದ ಪುತ್ರಿ ಲಿಯಾ ಎಂದು ಗುರುತಿಸಲಾಗಿದೆ.

ಮಂಗಳವಾರ ರಾತ್ರಿ ಸಿದ್ದಾಪುರದಿಂದ ಬಾಣಂಗಾಲ ಗ್ರಾಮದತ್ತ ಕುಟುಂಬ ಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ತೋಟದ ಕಾರ್ಮಿಕರು ಕೆರೆಯಲ್ಲಿ ಕಾರು ಮುಳುಗಿರುವುದನ್ನು ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಾರನ್ನು ಹೊರತೆಗೆದು ಪರಿಶೀಲಿಸಿದಾಗ ಅದರೊಳಗೆ ದಂಪತಿ ಹಾಗೂ ಮಗುವಿನ ಮೃತದೇಹಗಳು ಪತ್ತೆಯಾಗಿವೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿದ್ದಾಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಹಾಗೂ ಕಾನೂನು ಕ್ರಮ ಕೈಗೊಂಡಿದ್ದಾರೆ.
ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.