ಡೈಲಿವಾರ್ತೆ:21/ಅ./2026

ಕುಂದಾಪುರ: ಶಮಂತ್ ಜೆ., ಮಾನ್ಯ ಪೂಜಾರಿಗೆ ಬ್ಯಾಡ್ಮಿಂಟನ್ ಚಾಂಪಿಯನ್ ಪಟ್ಟ

ಕುಂದಾಪುರ: ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್, ಕೋಸ್ಟಾ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ಸುಜ್ಞಾನ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ಮತ್ತು ಬೈಂದೂರು ತಾಲೂಕು ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಬಾಲಕರ ವಿಭಾಗದಲ್ಲಿ ಶಮಂತ್ ಜೆ. ಹಾಗೂ ಬಾಲಕಿಯರ ವಿಭಾಗದಲ್ಲಿ ಮಾನ್ಯ ಪೂಜಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಶಮಂತ್ ಜೆ. ಅವರು ಶಯನ್ ಶೆಟ್ಟಿ ವಿರುದ್ಧ 18-16, 15-13 ಅಂತರದ ನೇರ ಗೇಮ್‌ಗಳ ಜಯ ದಾಖಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಚಾಂಪಿಯನ್ ಶಮಂತ್ ಅವರಿಗೆ ₹5,000 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಯಿತು. ರನ್ನರ್‌ಅಪ್ ಸ್ಥಾನ ಪಡೆದ ಶಯನ್ ಶೆಟ್ಟಿ ₹3,000 ನಗದು ಬಹುಮಾನ ಹಾಗೂ ಟ್ರೋಫಿ ಪಡೆದರು.

ಬಾಲಕರ ವಿಭಾಗದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗಂಗೊಳ್ಳಿಯ ಆರ್ಯನ್ ಅವರು ಕುಂದಾಪುರದ ಮೆಲ್ರಾನ್ ಕೋಥಾ ಅವರನ್ನು ಮಣಿಸಿ ಮೂರನೇ ಸ್ಥಾನ ಗಳಿಸಿದರು. ಅವರಿಗೆ ₹1,000 ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.

ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಮಾನ್ಯ ಪೂಜಾರಿ ಅವರು ಅನುಭವಿ ಆಟಗಾರ್ತಿ ಸಿರಿ ಎಸ್. ಅವರನ್ನು 15-10, 15-13 ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಪ್ರಶಸ್ತಿ ವಿಜೇತೆ ಮಾನ್ಯ ಪೂಜಾರಿ ₹5,000 ನಗದು ಬಹುಮಾನ ಹಾಗೂ ಟ್ರೋಫಿ ಪಡೆದರೆ, ರನ್ನರ್‌ಅಪ್ ಸಿರಿ ಎಸ್. ₹3,000 ನಗದು ಬಹುಮಾನ ಹಾಗೂ ಟ್ರೋಫಿಗೆ ಭಾಜನರಾದರು. ಈ ವಿಭಾಗದಲ್ಲಿ ವಿಲ್ಷಾ ಅಲ್ಮೇಡಾ ಮೂರನೇ ಸ್ಥಾನ ಪಡೆದು ₹1,000 ನಗದು ಬಹುಮಾನ ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು.

ಕಾರ್ಯಕ್ರಮದಲ್ಲಿ ಉದ್ಯಮಿ ವಿಲ್ಸನ್ ಅಲ್ಮೇಡಾ ಅವರು ವಿಜೇತ ಆಟಗಾರರಿಗೆ ಬಹುಮಾನ ವಿತರಿಸಿದರು. ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಪ್ರಥಮ್ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.