ಡೈಲಿವಾರ್ತೆ:21/ಅ./2026

ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಆನೆಯ ಆರ್ಭಟ: ಬೆಳ್ಳಿ ಅಂಬಾರಿ ಜಖಂ, ಕಾರುಗಳಿಗೆ ಹಾನಿ – ಜನರಲ್ಲಿ ಆತಂಕ!

ಶಿವಮೊಗ್ಗ, ಅ. 21: ನಗರದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ 450 ಕೆ.ಜಿ. ತೂಕದ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ನಿಯಂತ್ರಣ ತಪ್ಪಿ ಓಡಿದ ಘಟನೆ ಆತಂಕದ ವಾತಾವರಣ ಸೃಷ್ಟಿಸಿದೆ. ಆನೆಯ ಅಬ್ಬರದಿಂದ ಬೆಚ್ಚಿಬಿದ್ದ ಸಾರ್ವಜನಿಕರು ಜೀವಭಯದಿಂದ ದಿಕ್ಕಾಪಾಲಾಗಿ ಓಡಿದ್ದು ಘಟನೆಯ ವೇಳೆ ಕೆಲವು ಕಾರುಗಳು ಜಖಂಗೊಂಡಿವೆ. ಅಂಬಾರಿ ಜಾರಿ ಬಿದ್ದ ಪರಿಣಾಮ ಅದಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ನಗರದ ಶಿವಪ್ಪನಾಯಕ ಅರಮನೆಯಿಂದ ಸಂಪ್ರದಾಯದಂತೆ ಆರಂಭಗೊಂಡ ಜಂಬೂಸವಾರಿ ಮೆರವಣಿಗೆ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸೋಮಣ್ಣ ಆನೆ ಅಡ್ಡಾದಿಡ್ಡಿಯಾಗಿ ಓಡತೊಡಗಿದೆ. ಇದರಿಂದ ಮೆರವಣಿಗೆಯಲ್ಲಿದ್ದವರು ಹಾಗೂ ರಸ್ತೆಯಲ್ಲಿದ್ದ ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಯಿತು. ಆನೆಯ ಚಲನೆಯಿಂದ ವಾಹನಗಳಿಗೆ ಹಾನಿಯಾಗಿದ್ದು, ಬೆಳ್ಳಿ ಅಂಬಾರಿಯೂ ಜಖಂಗೊಂಡಿದೆ.

ಕೊನೇ ಕ್ಷಣದ ನಿರ್ಧಾರವೇ ಅವಘಡಕ್ಕೆ ಕಾರಣವಾಯಿತೇ?
ಈ ಬಾರಿಯ ದಸರಾ ಅಂಬಾರಿ ಹೊರುವುದಕ್ಕಾಗಿ ಆರಂಭದಲ್ಲಿ ಸಾಗರ್‌ ಆನೆಗೆ ತರಬೇತಿ ನೀಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸಾಗರ್‌ ಆನೆಗೆ ಕಾಲುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂಬಾರಿ ಹೊರಿಸುವ ಜವಾಬ್ದಾರಿಯನ್ನು ಸೋಮಣ್ಣ ಆನೆಗೆ ವಹಿಸಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ. ಸೋಮಣ್ಣ ಆನೆ ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದು, ಅದಕ್ಕೆ ಅಗತ್ಯವಾದ ತಾಲೀಮು ಸಮರ್ಪಕವಾಗಿ ದೊರೆಯದಿರುವುದೇ ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಅವಘಡಕ್ಕೆ ನಿಖರವಾದ ಕಾರಣವೇನು ಎಂಬುದು ಅಧಿಕೃತವಾಗಿ ದೃಢಪಡಬೇಕಿದೆ.

ಸಾರ್ವಜನಿಕರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು:
ದಸರಾ ಜಂಬೂಸವಾರಿ ಎಂದರೆ ಸಂಪ್ರದಾಯ, ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ವೈಭವದ ಪ್ರತೀಕ. ಆದರೆ, ಇಂತಹ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದು ಅತ್ಯಗತ್ಯ. ಅಂಬಾರಿ ಹೊರುವ ಆನೆಯ ಆಯ್ಕೆ, ಅದರ ಆರೋಗ್ಯ ಸ್ಥಿತಿ, ಪೂರ್ವಸಿದ್ಧತೆ, ತರಬೇತಿ ಹಾಗೂ ಜನಸಂದಣಿಯ ನಿಯಂತ್ರಣದಂತಹ ಅಂಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆಯೇ ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.
ಹಬ್ಬದ ಸಂಭ್ರಮಕ್ಕಿಂತ ಜನರ ಜೀವ ಅಮೂಲ್ಯ. ಸಂಪ್ರದಾಯ ಮತ್ತು ಪರಂಪರೆಯನ್ನು ಉಳಿಸುವುದರ ಜೊತೆಗೆ ಆನೆಗಳ ಕಲ್ಯಾಣ ಹಾಗೂ ಸಾರ್ವಜನಿಕರ ಪ್ರಾಣರಕ್ಷಣೆಯನ್ನು ಖಚಿತಪಡಿಸುವುದು ಸಂಬಂಧಪಟ್ಟ ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ. ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸಂಭವಿಸಿದ ಈ ಘಟನೆಯ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಅವಘಡದ ನಿಖರ ಕಾರಣ, ಹಾನಿಯ ಪ್ರಮಾಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಧಿಕೃತ ಮಾಹಿತಿ ಬಹಿರಂಗಪಡಿಸಬೇಕಿದೆ.
ಸಂಭ್ರಮದ ಆಚರಣೆ ಸುರಕ್ಷತೆಯೊಂದಿಗೆ ಸಾಗಿದಾಗ ಮಾತ್ರ ಹಬ್ಬದ ಘನತೆ ಉಳಿಯುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.