ಡೈಲಿವಾರ್ತೆ:22/ಅ./2026

ವಿಧಾನಸೌಧ ಸ್ಫೋಟದ ನಕಲಿ AI ರೀಲ್ಸ್ ವೈರಲ್: ಬಿಹಾರ ಮೂಲದ ಯುವಕನ ಬಂಧನ

ಬೆಂಗಳೂರು: ವಿಧಾನಸೌಧವನ್ನು ಸ್ಫೋಟಿಸಿದಂತೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದಡಿ ಬಿಹಾರ ಮೂಲದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹಜರತ್ ಅಲಿ ಎಂದು ಗುರುತಿಸಲಾಗಿದೆ. ನಗರದ ಜೆ.ಸಿ. ರಸ್ತೆಯಲ್ಲಿರುವ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ವಿಧಾನಸೌಧದ ಮುಂಭಾಗದಲ್ಲಿ ತೆಗೆಸಿಕೊಂಡಿದ್ದ ತನ್ನ ಫೋಟೋಗಳನ್ನು ಬಳಸಿಕೊಂಡು, ಕಟ್ಟಡ ಸ್ಫೋಟಗೊಂಡಿರುವಂತೆ ಬಿಂಬಿಸುವ ದೃಶ್ಯಗಳನ್ನು ಸೇರಿಸಿ ನಕಲಿ ರೀಲ್ಸ್ ಸಿದ್ಧಪಡಿಸಿದ್ದ ಎನ್ನಲಾಗಿದೆ.

ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವ ಸಾಧ್ಯತೆಯಿರುವ ಇಂತಹ ವಿಡಿಯೋಗಳ ಹಿಂದಿನ ಉದ್ದೇಶದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರಿ ಕಟ್ಟಡಗಳ ಕುರಿತು ಸುಳ್ಳು ದೃಶ್ಯಗಳನ್ನು ಸೃಷ್ಟಿಸಿ ಹರಡುವುದರಿಂದ ಉಂಟಾಗಬಹುದಾದ ಗಂಭೀರ ಪರಿಣಾಮಗಳ ಕುರಿತು ಈ ಪ್ರಕರಣ ಮತ್ತೊಮ್ಮೆ ಗಮನ ಸೆಳೆದಿದೆ.