




ಡೈಲಿವಾರ್ತೆ:22/ಅ./2026

ನೆಲ್ಯಾಡಿ: ನಿಂತಿದ್ದ ಗ್ಯಾಸ್ ಟ್ಯಾಂಕರ್ಗೆ ಕಾರು ಡಿಕ್ಕಿ – ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ನಸುಕಿನ ಜಾವ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ನೆಲ್ಯಾಡಿಯಲ್ಲಿ ‘ಪ್ಲವರ್ಸ್ ಹೋಟೆಲ್’ ನಡೆಸುತ್ತಿರುವ ಜೋಜೋ ಟಿ. ಜೋರ್ಜ್ ಅವರ ಪುತ್ರ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅನ್ವಿನ್ ಜೋಜೋ ಜಾರ್ಜ್ (16) ಎಂದು ಗುರುತಿಸಲಾಗಿದೆ.
ಗುರುವಾರ ನಸುಕಿನ ಜಾವ ಸುಮಾರು 1 ಗಂಟೆಯ ವೇಳೆಗೆ ನೆಲ್ಯಾಡಿಯ ಕರ್ಬಸಂಕ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ಗೆ ಅನ್ವಿನ್ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಜಖಂಗೊಂಡಿದ್ದು, ಗಂಭೀರವಾಗಿ ಗಾಯಗೊಂಡ ಅನ್ವಿನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಮಾಹಿತಿ ಲಭಿಸಿದ ತಕ್ಷಣ ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಅಪಘಾತದ ನಿಖರ ಕಾರಣ ತಿಳಿದುಬರಬೇಕಿದೆ.
ಇನ್ನೂ ಹದಿಹರೆಯದಲ್ಲಿದ್ದ ವಿದ್ಯಾರ್ಥಿಯ ದುರಂತ ಸಾವು ಕುಟುಂಬಸ್ಥರು ಹಾಗೂ ಆಪ್ತರಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.