




ಡೈಲಿವಾರ್ತೆ:23/ಅ./2026

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಯಡಾಡಿ-ಮತ್ಯಾಡಿಯಲ್ಲಿ ಕುಂದಾಪುರ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ: ಕ್ರೀಡಾ ಪ್ರತಿಭೆಗಳಿಗೆ ನಿರಂತರ ತರಬೇತಿ, ಪ್ರೋತ್ಸಾಹ ಅಗತ್ಯ: ಶಾಸಕ ಕಿರಣ್ ಕೊಡ್ಗಿ

ಕುಂದಾಪುರ: ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಪರಿಶ್ರಮ, ಬದ್ಧತೆ ಮತ್ತು ದೂರದೃಷ್ಟಿ ಅಗತ್ಯ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಗುಣಮಟ್ಟದ ಮೂಲಸೌಕರ್ಯಗಳು ಸರ್ಕಾರಿ ಶಾಲೆಗಳಲ್ಲಿಯೂ ದೊರೆಯುವಂತಾಗಬೇಕು. ಶಿಕ್ಷಣ ಸಂಸ್ಥೆಗಳ ಸಾಧನೆಗಳನ್ನು ಇತರರು ಮಾದರಿಯಾಗಿ ಸ್ವೀಕರಿಸಿ ತಮ್ಮ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.


ಅವರು ಯಡಾಡಿ-ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್ನಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸುಜ್ಞಾನ ಎಜುಕೇಶನ್ ಟ್ರಸ್ಟ್ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 2026-27ನೇ ಸಾಲಿನ ಕುಂದಾಪುರ ತಾಲೂಕು ಮಟ್ಟದ 14 ಮತ್ತು 17 ವರ್ಷದೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ಸಂಸ್ಥೆಯು ಅಲ್ಪಾವಧಿಯಲ್ಲಿ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದರೊಂದಿಗೆ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಮುಖ್ಯ ಎಂದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಲು ಬಾಲ್ಯದಿಂದಲೇ ನಿರಂತರ ಅಭ್ಯಾಸ, ವೈಜ್ಞಾನಿಕ ತರಬೇತಿ ಮತ್ತು ಸೂಕ್ತ ಮಾರ್ಗದರ್ಶನ ಅಗತ್ಯ. ಕ್ರಿಕೆಟ್ಗೆ ದೊರೆಯುವ ಜನಪ್ರಿಯತೆಯಂತೆ ಅಥ್ಲೆಟಿಕ್ಸ್ ಸೇರಿದಂತೆ ಇತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮರ್ಥ್ಯ ಗುರುತಿಸಿ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರ ಮೇಲಿದೆ ಎಂದರು.


ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಕ್ರೀಡೆ ಕೇವಲ ಸೋಲು-ಗೆಲುವಿನ ಆಟವಲ್ಲ; ಅದು ಶಿಸ್ತು, ಧೈರ್ಯ, ಆತ್ಮವಿಶ್ವಾಸ ಮತ್ತು ತಂಡದ ಮನೋಭಾವ ಬೆಳೆಸುವ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡಾಪಟುಗಳಿಗೆ ನಿರಂತರ ತರಬೇತಿ ಹಾಗೂ ದೀರ್ಘಕಾಲೀನ ಪ್ರೋತ್ಸಾಹ ದೊರೆಯಬೇಕು. ಸರ್ಕಾರದ ಜತೆಗೆ ಖಾಸಗಿ ಸಂಸ್ಥೆಗಳು ಮತ್ತು ಸಮಾಜವೂ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು.

ಗುತ್ತಿಗೆದಾರ ಅರುಣ್ ಕುಮಾರ್ ಶೆಟ್ಟಿ ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ವಿದ್ಯಾರಣ್ಯ ಸಂಸ್ಥೆಯ ಬೆಳವಣಿಗೆಯಿಂದ ಈ ಭಾಗದ ಅಭಿವೃದ್ಧಿಗೂ ವೇಗ ದೊರೆತಿದೆ ಎಂದರು.



ಸಭಾ ಕಾರ್ಯಕ್ರಮದ ಆರಂಭಕ್ಕೂ ಮೊದಲು ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಪಥಸಂಚಲನೆ ನಡೆಯಿತು.

ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಕ್ರೀಡಾಜ್ಯೋತಿ ಬೆಳಗಿಸಿದರು.

ಈ ಸಂದರ್ಭದಲ್ಲಿ ವಾಲಿಬಾಲ್ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಶ್ರೀಹರಿ ಅವರನ್ನು ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಣೇಶ್ ಶೆಟ್ಟಿ, ಸುಜ್ಞಾನ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಕುಮಾರ್ ಶೆಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರ ನಾಯಕ್, ದೈಹಿಕ ಶಿಕ್ಷಣ ಪರಿವೀಕ್ಷಕ ಸತ್ಯನಾರಾಯಣ ಸೇರಿದಂತೆ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದ ವಿವಿಧ ಗಣ್ಯರು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿದ್ಯಾರಣ್ಯ ಮತ್ತು ಸುಜ್ಞಾನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಸ್ವಾಗತಿಸಿದರು. ಸತ್ಯನಾರಾಯಣ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಲಾಸ್ಯ ಮಧ್ಯಸ್ಥ ಪ್ರತಿಜ್ಞಾವಿಧಿ ಬೋಧಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ರತ್ನಾಕರ ಹಾಗೂ ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಜ್ಞಾನ ಪದವಿಪೂರ್ವ ಕಾಲೇಜಿನ ರಜತ್ ಭಟ್ ವಂದಿಸಿದರು.