




ಡೈಲಿವಾರ್ತೆ:23/ಅ./2026

ಪ್ರೇರಣಾ, ಸಾನ್ವಿಗೆ ಕಲಾಶ್ರೀ ಪ್ರಶಸ್ತಿ ಗೌರವ

ಕೋಟ: ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2026ರ ಅಂಗವಾಗಿ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಹಾಗೂ ಕನ್ನಡ ಭವನ ಪ್ರಕಾಶನದ ವತಿಯಿಂದ ಪ್ರದಾನ ಮಾಡಲಾಗುವ ‘ಕಲಾಶ್ರೀ’ ಪ್ರಶಸ್ತಿಗೆ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯರಾದ ಪ್ರೇರಣಾ ಮತ್ತು ಸಾನ್ವಿ ಆಯ್ಕೆಯಾಗಿದ್ದಾರೆ.

ಇಬ್ಬರೂ ವಿದ್ಯಾರ್ಥಿನಿಯರು ಕಾಸರಗೋಡಿನಲ್ಲಿ ನಡೆದ ದಸರಾ ಸಾಂಸ್ಕೃತಿಕೋತ್ಸವದ ನವರಾತ್ರಿಯ 8ನೇ ದಿನದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಕಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಪ್ರಶಸ್ತಿಗೆ ಭಾಜನರಾಗಿರುವುದು ಶಾಲೆ ಹಾಗೂ ಊರಿನ ಹೆಮ್ಮೆಗೆ ಪಾತ್ರವಾಗಿದೆ.


ಪ್ರೇರಣಾ ಅವರು ಮಣೂರು ಪಡುಕೆರೆ ನಿವಾಸಿಗಳಾದ ನಾಗೇಶ್ ಮತ್ತು ಪ್ರೇಮ ದಂಪತಿಯ ಪುತ್ರಿಯಾಗಿದ್ದು, ಸಾನ್ವಿ ಅವರು ಪಾರಂಪಳ್ಳಿ ನಿವಾಸಿಗಳಾದ ನಾಗರಾಜ್ ಮತ್ತು ಸರಸ್ವತಿ ದಂಪತಿಯ ಪುತ್ರಿಯಾಗಿದ್ದಾರೆ. ಇಬ್ಬರೂ ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿಯೂ ಅವರು ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಿ ಶಾಲೆ ಹಾಗೂ ಊರಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.