


ಡೈಲಿವಾರ್ತೆ:28/ಅ./2026




ನ. 1ರಂದು ವಕ್ವಾಡಿ ಗುರುಕುಲದಲ್ಲಿ ‘ಗುರುಕುಲ ಕಾರ್ನಿವಲ್-2.0’ ಮಕ್ಕಳ ಹಬ್ಬ:
ರವಿ ಬಸ್ರೂರು ಅವರಿಂದ ಉದ್ಘಾಟನೆ – ಮಕ್ಕಳ ಸೃಜನಶೀಲತೆ ಮತ್ತು ಪ್ರತಿಭೆ ಅನಾವರಣಕ್ಕೆ ವೇದಿಕೆ

ಕೋಟೇಶ್ವರ: ಮಕ್ಕಳಲ್ಲಿನ ಸೃಜನಶೀಲತೆ, ಸುಪ್ತ ಪ್ರತಿಭೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ಕೋಟೇಶ್ವರ ಸಮೀಪದ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನ. 1ರಂದು ಭಾನುವಾರ ‘ಗುರುಕುಲ ಕಾರ್ನಿವಲ್-2.0’ ಮಕ್ಕಳ ಹಬ್ಬವನ್ನು ಆಯೋಜಿಸಲಾಗಿದೆ.
ಮಕ್ಕಳಲ್ಲಿ ಕಲಿಕೆಯ ಆಸಕ್ತಿ, ಸೃಜನಾತ್ಮಕ ಚಿಂತನೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದರೊಂದಿಗೆ, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಅಗತ್ಯವಾದ ಕೌಶಲ್ಯಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸ್ವಾವಲಂಬಿ ಬದುಕಿಗೆ ಪೂರಕವಾದ ಹೊಸ ಆಲೋಚನೆಗಳು ಮತ್ತು ಅವಕಾಶಗಳನ್ನು ಪರಿಚಯಿಸಿ, ಮಕ್ಕಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಭವಿಷ್ಯದಲ್ಲಿ ಸಮಾಜ ಹಾಗೂ ಪೋಷಕರ ಹೆಮ್ಮೆ ಎನಿಸುವಂತೆ ರೂಪಿಸುವ ಆಶಯದೊಂದಿಗೆ ಈ ಮಕ್ಕಳ ಹಬ್ಬವನ್ನು ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದ್ದು, ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಉದ್ಘಾಟಿಸಲಿದ್ದಾರೆ.
ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಕ್ಕಳ ಪ್ರತಿಭೆ ಹಾಗೂ ಸೃಜನಶೀಲತೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾರ್ನಿವಲ್ನಲ್ಲಿ ವಿವಿಧ ಆಕರ್ಷಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಬೇಬಿ ಶಾರ್ಕ್ ಟ್ಯಾಂಕ್, ಫೇಸ್ ಪೇಂಟಿಂಗ್, ಸ್ಪಾಟ್ ಪೋರ್ಟ್ರೇಟ್ ಮತ್ತು ಕ್ಯಾರಿಕೇಚರ್, ಕಾರ್ಟೂನ್ ಮ್ಯಾಸ್ಕಾಟ್, ಸ್ಪೀಕಿಂಗ್ ವಾಲ್ ಹಾಗೂ ಥ್ಯಾಂಕ್ ಯು ಕಾರ್ಡ್ಗಳಂತಹ ಚಟುವಟಿಕೆಗಳು ಮಕ್ಕಳ ಗಮನ ಸೆಳೆಯಲಿವೆ.


ಇದರೊಂದಿಗೆ 3ರಿಂದ 12 ವರ್ಷದ ಮಕ್ಕಳಿಗಾಗಿ ಸಾಂಸ್ಕೃತಿಕ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಗುರುಕುಲದ ವಿದ್ಯಾರ್ಥಿಗಳಲ್ಲದೆ ಹೊರಗಿನ ಶಾಲೆಗಳ ವಿದ್ಯಾರ್ಥಿಗಳಿಗೂ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಹಬ್ಬದ ಅಂಗವಾಗಿ ಗುರುಕುಲ ವಿದ್ಯಾರ್ಥಿಗಳ ಪೋಷಕರ ಸಹಭಾಗಿತ್ವದಲ್ಲಿ ವಿವಿಧ ರುಚಿಕರ ಆಹಾರ ಮಳಿಗೆಗಳನ್ನೂ ತೆರೆಯಲಾಗುತ್ತದೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಪೋಷಕರು ಹಾಗೂ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳ ಪ್ರತಿಭೆ, ಕ್ರಿಯಾಶೀಲತೆ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತೆ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕ ಕೆ. ಸುಭಾಶ್ಚಂದ್ರ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9482098367 ಸಂಖ್ಯೆಯನ್ನು ಸಂಪರ್ಕಿಸಬಹುದು. ಇ-ಮೇಲ್: info@bhandyagurukula.com

