ಡೈಲಿವಾರ್ತೆ:28/ಅ./2026

ತದಡಿ ಬಂದರಿನಲ್ಲಿ ಭೀಕರ ದುರಂತ: ಬೋಟ್‌ನೊಳಗೆ ಉಸಿರುಗಟ್ಟಿ ಮೂವರು ಮೀನುಗಾರರ ಸಾವು: ಇಬ್ಬರ ರಕ್ಷಣೆ, ಓರ್ವನ ಸ್ಥಿತಿ ಗಂಭೀರ

ಕಾರವಾರ: ಮೀನುಗಾರಿಕೆ ಮುಗಿಸಿ ಬಂದರಿಗೆ ಮರಳಿದ್ದ ಮೀನುಗಾರರು ಬೋಟ್‌ನಲ್ಲಿನ ಮೀನು ಸಂಗ್ರಹದ ಸ್ಥಳವನ್ನು ಸ್ವಚ್ಛಗೊಳಿಸುವ ವೇಳೆ ಉಸಿರಾಟದ ತೊಂದರೆಯಿಂದ ಮೂವರು ಮೃತಪಟ್ಟ ಘಟನೆ ಗೋಕರ್ಣದ ತದಡಿ ಬಂದರಿನಲ್ಲಿ ನಡೆದಿದೆ. ಘಟನೆಯಲ್ಲಿ ಅಸ್ವಸ್ಥಗೊಂಡ ಇಬ್ಬರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೃತರನ್ನು ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ಅಬ್ದುಲ್ ಯಾಕುಬ್ ದಾಡಿಯಾ (60) ಅವರನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೀನುಗಾರರು ತದಡಿ ಬಂದರಿನ ಕುಚೈಮಾ ಬೋಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೀನುಗಾರಿಕೆ ಮುಗಿಸಿ ಚಮನ್ ಮೀನುಗಳೊಂದಿಗೆ ಬಂದರಿಗೆ ವಾಪಸಾಗಿದ್ದ ಅವರು, ಬೋಟ್‌ನಲ್ಲಿದ್ದ ಮೀನುಗಳನ್ನು ಸಂಗ್ರಹದ ಸ್ಥಳದಿಂದ ಖಾಲಿ ಮಾಡಿದ ಬಳಿಕ ಆ ಭಾಗವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಉಸಿರಾಟದ ಸಮಸ್ಯೆ ಉಂಟಾಗಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಬೋಟ್‌ನಲ್ಲಿ ಮೀನುಗಳನ್ನು ಸಂಗ್ರಹಿಸಿಡುತ್ತಿದ್ದ ಸ್ಥಳದಲ್ಲಿ ದುರ್ನಾತ ಅಥವಾ ವಿಷಕಾರಿ ಅನಿಲ ಉತ್ಪತ್ತಿಯಾಗಿರುವ ಸಾಧ್ಯತೆಯಿದ್ದು, ಅದರಿಂದ ಉಸಿರಾಟಕ್ಕೆ ತೊಂದರೆಯಾಗಿ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಮೀನುಗಾರರ ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ.
ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣದ ಕುರಿತು ತನಿಖೆ ನಡೆಯಬೇಕಿದೆ.