ಡೈಲಿವಾರ್ತೆ:27/ಅ./2026

ಪೊಲೀಸ್ ವಿಚಾರಣೆಯಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ: ಸುರತ್ಕಲ್ ಠಾಣೆ ಎದುರು ಮೃತದೇಹವಿಟ್ಟು ಪ್ರತಿಭಟನೆ

ಮಂಗಳೂರು: ಪೊಲೀಸ್ ವಿಚಾರಣೆಯಿಂದ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಸುರತ್ಕಲ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪ್ರತಿಭಟನೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ಸುರತ್ಕಲ್‌ನ ಹೊಸಬೆಟ್ಟು ನಿವಾಸಿ ಸೋಮನಾಥ (48) ಮೃತಪಟ್ಟ ವ್ಯಕ್ತಿ. ಅಕ್ಟೋಬರ್ 25ರ ರಾತ್ರಿ ಹೊಸಬೆಟ್ಟು ಬೀಚ್ ಬಳಿ ಕಂಡುಬಂದ ಜೋಡಿಯೊಂದನ್ನು ಸೋಮನಾಥ ಅವರು ಪ್ರಶ್ನಿಸಿದ್ದರು ಎನ್ನಲಾಗಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ಯುವತಿಯೊಬ್ಬರು ಸೋಮನಾಥ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಸೋಮನಾಥ ಅವರನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಮನೆಗೆ ಕಳುಹಿಸಿದ್ದರು.
ಪೊಲೀಸ್ ವಿಚಾರಣೆಯಿಂದ ಮನನೊಂದು ಸೋಮನಾಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪೊಲೀಸರ ವರ್ತನೆಯೇ ಅವರ ಸಾವಿಗೆ ಕಾರಣ ಎಂಬ ಆರೋಪದೊಂದಿಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮೃತದೇಹವನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದರು. ನೂರಾರು ಮಂದಿ ಸ್ಥಳೀಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಘಟನೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಪೊಲೀಸರೊಂದಿಗೆ ಮಾತುಕತೆ ನಡೆಸಿದರು. ಈ ನಡುವೆ, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಘಟನೆಯ ಕುರಿತು ಸ್ಪಷ್ಟನೆ ನೀಡಿದರು.

ಪ್ರತಿಭಟನಾಕಾರರು ಸ್ಥಳದಿಂದ ತೆರಳುವ ಮುನ್ನ, ಸೋಮನಾಥ ವಿರುದ್ಧ ದೂರು ನೀಡಿದ್ದ ಯುವತಿ ಹಾಗೂ ಆಕೆಯ ಪ್ರಿಯಕರನ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಸೋಮನಾಥ ಅವರ ಸಾವಿಗೆ ಅವರಿಬ್ಬರೇ ಕಾರಣ ಎಂಬ ಆರೋಪವನ್ನೂ ಮುಂದಿಟ್ಟರು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಈ ಸಂಬಂಧ ದೂರು ಸಲ್ಲಿಸಲು ಅವಕಾಶವಿದ್ದು, ದೂರು ಸ್ವೀಕರಿಸಿದ ಬಳಿಕ ಅದರ ಆಧಾರದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಲಾಯಿತು. ಬಳಿಕ ಪ್ರತಿಭಟನಾಕಾರರು ಮೃತದೇಹವನ್ನು ಅಲ್ಲಿಂದ ತೆಗೆದುಕೊಂಡು ತೆರಳಿದ್ದು, ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.