


ಡೈಲಿವಾರ್ತೆ:28/ಅ./2026




ಬ್ರಹ್ಮಾವರ: ರೌಡಿಶೀಟರ್ ಸುಜಿತ್ ಪಿಂಟೋ ಬರ್ಬರ ಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ವಶಕ್ಕೆ

ಬ್ರಹ್ಮಾವರ: ವೈಯಕ್ತಿಕ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ರೌಡಿಶೀಟರ್ ಸುಜಿತ್ ಪಿಂಟೋ (43) ಅವರನ್ನು ಸ್ಟೀಲ್ ಪೈಪ್ನಿಂದ ತಲೆಗೆ ಪದೇಪದೇ ಬಲವಾಗಿ ಹೊಡೆದು ಹತ್ಯೆಗೈದ ಘಟನೆ ಅಕ್ಟೋಬರ್ 27ರ ರಾತ್ರಿ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕಾಡಿ ಗ್ರಾಮದ ಪಡುಬೈಕಾಡಿ ನಿವಾಸಿಗಳಾದ ಪ್ರದೀಪ್ ಪೂಜಾರಿ (45) ಮತ್ತು ಪ್ರಮೋದ್ ಪೂಜಾರಿ (39) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೈಯಕ್ತಿಕ ವಿಚಾರಕ್ಕೆ ಮಾತಿನ ಚಕಮಕಿ:

ಅಕ್ಟೋಬರ್ 27ರಂದು ರಾತ್ರಿ 7.30ರಿಂದ 8.30ರ ನಡುವಿನ ಅವಧಿಯಲ್ಲಿ ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ಅವರು ಬೈಕಾಡಿ ಗ್ರಾಮದ ಜೀವನ್ ಪೂಜಾರಿ ಹಾಗೂ ಉಡುಪಿ ಕಲ್ಯಾಣಪುರದ ಸಂತೆಕಟ್ಟೆ ನಿವಾಸಿ ಸುಜಿತ್ ಪಿಂಟೋ ಅವರನ್ನು ಭದ್ರಗಿರಿ ಸರ್ಕಲ್ ಬಳಿ ಕರೆಸಿಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ವೈಯಕ್ತಿಕ ವಿಚಾರವಾಗಿ ಆರಂಭವಾದ ಮಾತುಕತೆ ವಾಗ್ವಾದಕ್ಕೆ ತಿರುಗಿದ್ದು, ಬಳಿಕ ಪರಸ್ಪರ ಕೈಯಿಂದ ಹಲ್ಲೆ ನಡೆಸುವ ಹಂತಕ್ಕೆ ತಲುಪಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಲಾಟೆಯ ಸಂದರ್ಭದಲ್ಲಿ ಪ್ರದೀಪ್ ಪೂಜಾರಿ ಅವರು ಸುಜಿತ್ ಪಿಂಟೋ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಪ್ರಮೋದ್ ಪೂಜಾರಿ ತನ್ನ ಪ್ಯಾಂಟ್ನ ಹಿಂಭಾಗದಲ್ಲಿ ಇರಿಸಿಕೊಂಡಿದ್ದ ಸ್ಟೀಲ್ ಪೈಪ್ನಿಂದ ಅವರ ತಲೆಗೆ ಪದೇಪದೇ ಬಲವಾಗಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಜಗಳವನ್ನು ಬಿಡಿಸಲು ಮಧ್ಯಪ್ರವೇಶಿಸಿದ ಜೀವನ್ ಪೂಜಾರಿ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವು:

ಸ್ಟೀಲ್ ಪೈಪ್ನಿಂದ ನಡೆದ ಹಲ್ಲೆಯಿಂದ ಸುಜಿತ್ ಪಿಂಟೋ ಅವರ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಜಿತ್ ಪಿಂಟೋ ಅವರ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆಯ ಪ್ರತ್ಯಕ್ಷ ಸಾಕ್ಷಿ ಎನ್ನಲಾದ ಭದ್ರಗಿರಿ ಬೈಕಾಡಿಯ ಬಾಡಿಗೆ ಮನೆಯ ನಿವಾಸಿ ಜೀವನ್ ಪೂಜಾರಿ (31) ನೀಡಿದ ದೂರಿನ ಆಧಾರದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಹಣಕಾಸು ವಿಚಾರವೂ ಹತ್ಯೆಗೆ ಕಾರಣವಾಗಿರುವ ಶಂಕೆ!
ಪ್ರಾಥಮಿಕ ವಿಚಾರಣೆಯ ಪ್ರಕಾರ, ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ವೈಯಕ್ತಿಕ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ದ್ವೇಷವೇ ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಹತ್ಯೆಯ ಹಿಂದಿನ ನಿಖರ ಕಾರಣ ತನಿಖೆಯಿಂದ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಮೃತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು:

ಹತ್ಯೆಗೀಡಾದ ಸುಜಿತ್ ಪಿಂಟೋ ಮಲ್ಪೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದರು. ಉಡುಪಿ ನಗರ, ಮಲ್ಪೆ, ಹಿರಿಯಡ್ಕ ಮತ್ತು ಮಣಿಪಾಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

