ಡೈಲಿವಾರ್ತೆ:29/ಅ./2026

ಕುಂದಾಪುರ: ವಿಶೇಷ ಚೇತನರ ಕ್ರೀಡಾಕೂಟದಲ್ಲಿ ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿನಿ ನಜ್ಮೀನ್ ಹ್ಯಾಟ್ರಿಕ್ ಸಾಧನೆ – ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಸುಣ್ಣಾರಿಯ ಎಕ್ಸಲೆಂಟ್ ಇಂಡಿಯನ್ ಸ್ಕೂಲ್‌ನ 9ನೇ ತರಗತಿ ವಿದ್ಯಾರ್ಥಿನಿ ನಜ್ಮೀನ್ ಕೆ.ಎಚ್. ಅತ್ಯುತ್ತಮ ಸಾಧನೆ ಮೆರೆದಿದ್ದು, ಚಾಂಪಿಯನ್ ಪ್ರಶಸ್ತಿಯೊಂದಿಗೆ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ, ಉಡುಪಿ ಹಾಗೂ ಕೆ.ಪಿ.ಎಸ್. ಸ್ಕೂಲ್, ಕೊಕ್ಕರ್ಣೆ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 17 ವರ್ಷ ವಯೋಮಾನದೊಳಗಿನ ವಿಶೇಷ ಚೇತನ ಬಾಲಕಿಯರ ವಿಭಾಗದ ಸ್ಪರ್ಧೆಗಳಲ್ಲಿ ನಜ್ಮೀನ್ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ. ಗುಂಡು ಎಸೆತ ಮತ್ತು 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅವರು, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮೂರು ಸ್ಪರ್ಧೆಗಳಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪ್ರಶಸ್ತಿಗೆ ಭಾಜನರಾದ ನಜ್ಮೀನ್, ತಮ್ಮ ಸಾಧನೆಯ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಈ ಯಶಸ್ಸು ಶಾಲೆಯ ಕ್ರೀಡಾ ಕ್ಷೇತ್ರದ ಸಾಧನೆಗೆ ಮತ್ತೊಂದು ಗರಿಮೆಯಾಗಿದೆ.

ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದು, ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ