


ಡೈಲಿವಾರ್ತೆ:29/ಅ./2026




ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಈ ಬಾರಿ ಬ್ರೇಕ್? 250ಕ್ಕೂ ಅಧಿಕ ಅರ್ಜಿಗಳ ಸಲ್ಲಿಕೆ – ಕೊನೆ ಕ್ಷಣದಲ್ಲಿ ಪ್ರಶಸ್ತಿ ಪ್ರದಾನ ಕೈಬಿಡುವ ನಿರ್ಧಾರಕ್ಕೆ ಆಕ್ಷೇಪ

ಉಡುಪಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪರಂಪರೆಗೆ ಈ ಬಾರಿ ತಡೆ ಬೀಳುವ ಸಾಧ್ಯತೆ ವ್ಯಕ್ತವಾಗಿದ್ದು, ಜಿಲ್ಲಾದ್ಯಂತ ಚರ್ಚೆಗೆ ಕಾರಣವಾಗಿದೆ.
ಹಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಪ್ರಶಸ್ತಿ ಪ್ರದಾನ ಪ್ರಕ್ರಿಯೆಯನ್ನು ಈ ಬಾರಿ ಕೈಬಿಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿದೆ.
ಸಾಹಿತ್ಯ, ಶಿಕ್ಷಣ, ಲಲಿತಕಲೆ, ಸಮಾಜಸೇವೆ, ಜಾನಪದ, ಪರಿಸರ ಮತ್ತು ವಿಜ್ಞಾನ, ವೈದ್ಯಕೀಯ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಹಲವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಸಾಧನೆಗಳನ್ನು ದಾಖಲಿಸುವ ಸಮಗ್ರ ಕಡತಗಳನ್ನು ಸಿದ್ಧಪಡಿಸಿ, ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನೂ ಪಡೆದುಕೊಂಡು ಪ್ರಶಸ್ತಿಗಾಗಿ ಪ್ರಯತ್ನ ನಡೆಸಿದ್ದಾರೆ.
ಲಭ್ಯವಾದ ಮಾಹಿತಿಯ ಪ್ರಕಾರ, ಹಲವು ಶಾಸಕರು ಹಾಗೂ ಜನಪ್ರತಿನಿಧಿಗಳು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಪತ್ರಗಳನ್ನು ಸಲ್ಲಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ 250ಕ್ಕೂ ಅಧಿಕ ಅರ್ಜಿಗಳು ತಲುಪಿವೆ ಎನ್ನಲಾಗಿದೆ. ಇಷ್ಟೆಲ್ಲ ಸಿದ್ಧತೆಗಳು ನಡೆದಿರುವ ನಡುವೆಯೇ, ಕೊನೆಯ ಹಂತದಲ್ಲಿ ಜಿಲ್ಲಾ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಪುರಸ್ಕಾರ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ ಎಂಬ ಮಾಹಿತಿ ಜಿಲ್ಲಾಧಿಕಾರಿ ಕಚೇರಿಯ ಮೂಲಗಳಿಂದ ತಿಳಿದುಬಂದಿದೆ.
ದಕ್ಷಿಣ ಕನ್ನಡದಲ್ಲಿ ಪ್ರಶಸ್ತಿ ಪ್ರದಾನಕ್ಕೆ ಸಿದ್ಧತೆ; ಉಡುಪಿಯಲ್ಲಿ ಮಾತ್ರ ಸ್ಥಗಿತದ ಚರ್ಚೆ
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದು ಕೇವಲ ಪ್ರಶಸ್ತಿ ಪ್ರದಾನಕ್ಕೆ ಸೀಮಿತವಾದ ಪ್ರಕ್ರಿಯೆಯಲ್ಲ. ಸ್ಥಳೀಯ ಮಟ್ಟದಲ್ಲಿ ಗುರುತಿಸಿಕೊಳ್ಳದೆ ಉಳಿದಿರುವ ಅನೇಕ ಪ್ರತಿಭಾವಂತರ ಸಾಧನೆಗಳನ್ನು ಸಮಾಜದ ಮುಂದೆ ಪರಿಚಯಿಸಲು ಇದು ಮಹತ್ವದ ವೇದಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ವರ್ಷಗಳಿಂದ ನಡೆದುಕೊಂಡು ಬಂದಿರುವ ಪುರಸ್ಕಾರ ಪರಂಪರೆಯನ್ನು ಮುಂದುವರಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯೂ ಸಾಧಕರಿಂದ ಅರ್ಜಿಗಳನ್ನು ಆಹ್ವಾನಿಸಿ ಪ್ರಶಸ್ತಿ ಪ್ರದಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಮಾತ್ರ ಏಕಾಏಕಿ ಈ ಪ್ರಕ್ರಿಯೆಯನ್ನು ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಆಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವುದರಿಂದ ಹಿಡಿದು ಅಗತ್ಯ ದಾಖಲೆಗಳನ್ನು ಸಂಗ್ರಹಿಸುವವರೆಗೆ ಸಮಯ ಮತ್ತು ಶ್ರಮ ವಿನಿಯೋಗಿಸಿರುವ ಸಾಧಕರಿಗೆ ಕೊನೆಯ ಕ್ಷಣದಲ್ಲಿ ಇಂತಹ ಬೆಳವಣಿಗೆ ಎದುರಾಗಿರುವುದು ನಿರಾಶೆ ಮೂಡಿಸಿದೆ. ಹಲವು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ನಿಲ್ಲಿಸುವುದಾದರೆ, ಅದಕ್ಕೆ ಸೂಕ್ತ ಕಾರಣವನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಲು ಆಗ್ರಹ:
ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಮಹತ್ವದ ಕಾರ್ಯಕ್ರಮವನ್ನು ಈ ಬಾರಿ ಕೈಬಿಡಬಾರದು ಎಂಬ ಒತ್ತಾಯ ಸಾರ್ವಜನಿಕರು ಹಾಗೂ ಪ್ರಶಸ್ತಿ ಆಕಾಂಕ್ಷಿಗಳಿಂದ ವ್ಯಕ್ತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಹಿಂದಿನ ವರ್ಷಗಳಂತೆ ಈ ಬಾರಿಯೂ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಪ್ರಕ್ರಿಯೆ ಮುಂದುವರಿಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸ್ಥಗಿತಗೊಳಿಸುವುದು ಸರಿಯಲ್ಲ: ನೀಲಾವರ ಸುರೇಂದ್ರ ಅಡಿಗ:
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಜಿಲ್ಲಾ ರಾಜ್ಯೋತ್ಸವ ಪುರಸ್ಕಾರವನ್ನು ಸ್ಥಗಿತಗೊಳಿಸುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತವು ಹಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಉತ್ತಮ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕಳೆದ 14 ವರ್ಷಗಳಿಂದ ಈ ಪ್ರಕ್ರಿಯೆಯನ್ನು ಗಮನಿಸುತ್ತಿದ್ದು, ಯಾವುದೇ ವರ್ಷ ಪ್ರಶಸ್ತಿ ಪ್ರದಾನವನ್ನು ಸ್ಥಗಿತಗೊಳಿಸಿರುವುದು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಗೌರವಗಳು ಸಾಧಕರಿಗೆ ಪ್ರೋತ್ಸಾಹ ನೀಡುವುದರ ಜತೆಗೆ, ಇತರರಿಗೂ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಸ್ಫೂರ್ತಿಯಾಗುತ್ತವೆ. ಹೀಗಾಗಿ, ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ನಿರಂತರವಾಗಿ ಮುಂದುವರಿಸಬೇಕು. ಈ ಬಾರಿ ಏಕಾಏಕಿ ಪ್ರಶಸ್ತಿ ಪ್ರದಾನವನ್ನು ನಿಲ್ಲಿಸುವ ನಿರ್ಧಾರ ಸರಿಯಲ್ಲ ಎಂದು ನೀಲಾವರ ಸುರೇಂದ್ರ ಅಡಿಗ ಅಭಿಪ್ರಾಯಪಟ್ಟಿದ್ದಾರೆ.

