


ಡೈಲಿವಾರ್ತೆ:29/ಅ./2026




ಉಳ್ಳಾಲ: ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಅಪಹರಣ – ಆರೋಪಿ ಬಂಧನ, ಬಾಲಕಿ ರಕ್ಷಣೆ

ಉಳ್ಳಾಲ: ಶಾಲೆಗೆ ತೆರಳುತ್ತಿದ್ದ 9ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ದು ಅಪಹರಿಸಿದ ಆರೋಪದ ಮೇಲೆ ಉಳ್ಳಾಲ ಪೊಲೀಸರು 23 ವರ್ಷದ ಯುವಕನನ್ನು ಬಂಧಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ.
ಬಂಧಿತನನ್ನು ಬಾಗಲಕೋಟೆ ಮೂಲದ, ಗಾರೆ ಕೆಲಸ ಮಾಡುತ್ತಿದ್ದ ಗೂಡಾಸಾಬ್ ಅಲಿಯಾಸ್ ಆಶಿಫ್ (23) ಎಂದು ಗುರುತಿಸಲಾಗಿದೆ.
ಉಳ್ಳಾಲ ತಾಲೂಕು ವ್ಯಾಪ್ತಿಯ ಕಲ್ಲಾಪು ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಾಗಲಕೋಟೆ ಮೂಲದ ಕುಟುಂಬವೊಂದರ ಇಬ್ಬರು ಅಪ್ರಾಪ್ತ ಸಹೋದರಿಯರು ಸಮೀಪದ ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಎಂದಿನಂತೆ ಪೋಷಕರು ಇಬ್ಬರನ್ನೂ ಶಾಲೆಗೆ ಕಳುಹಿಸಿದ್ದರು. ಆದರೆ, ಹಿರಿಯ ಮಗಳು ಶಾಲೆಗೆ ಹಾಜರಾಗದಿರುವುದನ್ನು ಗಮನಿಸಿದ ಶಿಕ್ಷಕಿ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಈ ನಡುವೆ, ಆರೋಪಿ ಗೂಡಾಸಾಬ್ ಅಲಿಯಾಸ್ ಆಶಿಫ್ ಶಾಲೆಯ ಸಮೀಪ ಬಾಲಕಿಯನ್ನು ಹಿಂಬಾಲಿಸಿ ಮಾತನಾಡಿಸುತ್ತಿದ್ದ ವಿಚಾರವನ್ನು ಆಕೆ ಈ ಹಿಂದೆಯೇ ತಾಯಿಯ ಗಮನಕ್ಕೆ ತಂದಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಆರೋಪಿಗೆ ಎಚ್ಚರಿಕೆಯನ್ನೂ ನೀಡಿದ್ದರು ಎಂದು ತಿಳಿದು ಬಂದಿದೆ. ಆದರೂ ಆರೋಪಿ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮಗಳು ನಾಪತ್ತೆಯಾಗಿರುವುದು ಹಾಗೂ ಆರೋಪಿಯ ಮೇಲಿನ ಅನುಮಾನಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಮಂಗಳವಾರ ಸಂಜೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಗಳನ್ನು ಪತ್ತೆಹಚ್ಚಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ರಾತ್ರಿಯೇ ಸೋಮೇಶ್ವರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಅಪಹರಣಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಬಾಲಕಿಯ ಹೇಳಿಕೆಯ ಆಧಾರದಲ್ಲಿ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

