ಡೈಲಿವಾರ್ತೆ:29/ಅ./2026

ಅ. 30ರಿಂದ ನ. 1ರವರೆಗೆ ಬ್ರಹ್ಮಾವರದಲ್ಲಿ ವಿಶ್ವಕರ್ಮ ಟ್ರೋಫಿ ಕ್ರಿಕೆಟ್ ಪಂದ್ಯಾಟ:
ಅಗಲಿದ ಗೆಳೆಯನ ಸ್ಮರಣಾರ್ಥ ಮಾಣಿಕ್ಯ ಪ್ರೀಮಿಯರ್ ಲೀಗ್–2026

ಬ್ರಹ್ಮಾವರ, ಅ. 29: ಅಗಲಿದ ಗೆಳೆಯ ಪ್ರದೀಪ್ ಆಚಾರ್ಯ ಅವರ ಸ್ಮರಣಾರ್ಥ ಮಾಣಿಕ್ಯ ಕ್ರಿಕೆಟರ್ಸ್ ನೀಲಾವರ ಆಶ್ರಯದಲ್ಲಿ ಮಾಣಿಕ್ಯ ಪ್ರೀಮಿಯರ್ ಲೀಗ್–2026 ಹಾಗೂ ವಿಶ್ವಕರ್ಮ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಅ. 30ರಿಂದ ನ. 1ರವರೆಗೆ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾಟದಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿವೆ ಎಂದು ಮಾಣಿಕ್ಯ ಕ್ರಿಕೆಟರ್ಸ್ ಮುಖ್ಯಸ್ಥ ರಾಜೇಶ್ ಆಚಾರ್ಯ ತಿಳಿಸಿದರು.

ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾಟವು ಹೆಬ್ಬಲಸಿನಕಟ್ಟೆ ನೀಲಾವರ ಕ್ರಾಸ್ ಹಾಗೂ ಚಾಂತಾರಿನ ಗ್ಲೋಬಲ್ ಗ್ರೌಂಡ್‌ನಲ್ಲಿ ನಡೆಯಲಿದೆ. ಗಣ್ಯರ ಉಪಸ್ಥಿತಿಯಲ್ಲಿ ಪಂದ್ಯಾಟಕ್ಕೆ ಚಾಲನೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಕಟಪಾಡಿ ಸಮಾನ ಮನಸ್ಕರ ತಂಡದ ಶಶಿಧರ ಪುರೋಹಿತ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಮಾಣಿಕ್ಯ ಕ್ರಿಕೆಟರ್ಸ್ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಮಾತನಾಡಿ, ವಿಶ್ವಕರ್ಮ ಟ್ರೋಫಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟವಾಗಿದ್ದು, ಕ್ರೀಡಾಕೂಟದ ಖರ್ಚು-ವೆಚ್ಚಗಳನ್ನು ಭರಿಸಿದ ಬಳಿಕ ಉಳಿಯುವ ಮೊತ್ತವನ್ನು ಅಗಲಿದ ಪ್ರದೀಪ್ ಆಚಾರ್ಯ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಣಿಕ್ಯ ಕ್ರಿಕೆಟರ್ಸ್‌ನ ರಾಘವೇಂದ್ರ ಆಚಾರ್ಯ ಮಟಪಾಡಿ, ಗಣೇಶ್ ಆಚಾರ್ಯ, ಗಣೇಶ್ ಆಚಾರ್ಯ ಕೆ., ವಿನಯ ಆಚಾರ್ಯ ಹಾಗೂ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು.