ಡೈಲಿವಾರ್ತೆ:30/ಅ./2026

ಬ್ರಹ್ಮಾವರ ಆಕಾಶವಾಣಿ ಸರ್ಕಲ್‌ನಲ್ಲಿ
ಯೂಟರ್ನ್ ಪಡೆಯುತ್ತಿದ್ದ ಲಾರಿಗೆ ಟೂರಿಸ್ಟ್ ಬಸ್ ಡಿಕ್ಕಿ: ಡಿವೈಡರ್ ಏರಿದ ಬಸ್, ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಲಾರಿ

ಬ್ರಹ್ಮಾವರ: ಯೂಟರ್ನ್ ಪಡೆಯುತ್ತಿದ್ದ ಲಾರಿಗೆ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ಆಕಾಶವಾಣಿ ಸರ್ಕಲ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಲಾರಿಯಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಬಾರ್ಕೂರು ಕಡೆಯಿಂದ ಬಂದ ಲಾರಿಯು ಬ್ರಹ್ಮಾವರ ಆಕಾಶವಾಣಿ ಸರ್ಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಕುಂದಾಪುರದ ಕಡೆಗೆ ತೆರಳಲು ಯೂಟರ್ನ್ ಪಡೆಯುತ್ತಿದ್ದ ವೇಳೆ, ಉಡುಪಿಯಿಂದ ಕುಂದಾಪುರದ ಕಡೆಗೆ ಸಂಚರಿಸುತ್ತಿದ್ದ ಟೂರಿಸ್ಟ್ ಬಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಏರಿ ನಿಂತಿದೆ.
ಇದೇ ವೇಳೆ, ಬಸ್ ಡಿಕ್ಕಿಯಾದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ಹೆದ್ದಾರಿಯನ್ನು ದಾಟಿ ಸರ್ವಿಸ್ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯಿಂದ ಎರಡೂ ವಾಹನಗಳಿಗೆ ಹಾನಿಯಾಗಿದೆ.

ತಿರುಪತಿ ಪ್ರವಾಸ ಮುಗಿಸಿ ಹಿಂದಿರುಗಿದ್ದ ಟೂರಿಸ್ಟ್ ಬಸ್, ಪ್ರಯಾಣಿಕರನ್ನು ಉಡುಪಿಯಲ್ಲಿ ಇಳಿಸಿ ಬಳಿಕ ಕುಂದಾಪುರದ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದಿದ್ದರಿಂದ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದೆ.
ಘಟನೆಯಲ್ಲಿ ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.