ಡೈಲಿವಾರ್ತೆ:30/ಅ./2026

ಮಂಗಳೂರು ಉತ್ತರದ 9 ವಾರ್ಡ್‌ಗಳಲ್ಲಿ ಸ್ಪರ್ಧೆಗೆ SDPI ನಿರ್ಧಾರ:
ಭ್ರಷ್ಟ ಆಡಳಿತದ ವಿರುದ್ಧ ಹೋರಾಟ; ಮೂಲಭೂತ ಸಮಸ್ಯೆಗಳೇ ಚುನಾವಣಾ ಅಸ್ತ್ರ

ಸುರತ್ಕಲ್, ಅ. 30: ಮುಂಬರುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 21 ವಾರ್ಡ್‌ಗಳ ಪೈಕಿ 9 ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನಿರ್ಧರಿಸಿದೆ.

ಸುರತ್ಕಲ್‌ನ ಚೊಕ್ಕಬೆಟ್ಟುವಿನಲ್ಲಿ ಕ್ಷೇತ್ರಾಧ್ಯಕ್ಷ ಉಸ್ಮಾನ್ ಗುರುಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷ, ಕ್ಷೇತ್ರದಲ್ಲಿ ತನ್ನ ರಾಜಕೀಯ ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಜನರ ಸಮಸ್ಯೆಗಳನ್ನು ಚುನಾವಣಾ ಪ್ರಚಾರದ ಪ್ರಮುಖ ವಿಷಯವನ್ನಾಗಿ ಮುಂದಿಡಲು ಸಿದ್ಧತೆ ನಡೆಸಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಭ್ರಷ್ಟ ಆಡಳಿತಕ್ಕೆ ಪರ್ಯಾಯವಾಗಿ ಜನಪರ ಆಡಳಿತವನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ SDPI ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾರ್ಯಕರ್ತರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಚುನಾವಣಾ ಸಿದ್ಧತೆಗಳಿಗೆ ವೇಗ ನೀಡಬೇಕು ಎಂದು ಕರೆ ನೀಡಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆ ಹಾಗೂ ಕೋಮುವಾದಿ ರಾಜಕಾರಣದ ವಿರುದ್ಧದ ಹೋರಾಟವನ್ನು ಪ್ರಮುಖವಾಗಿ ಮುಂದಿಟ್ಟುಕೊಂಡು ಚುನಾವಣಾ ಕಣಕ್ಕಿಳಿಯಲು ಪಕ್ಷ ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ SDPI ಜಿಲ್ಲಾ ಉಪಾಧ್ಯಕ್ಷ ಅಝೀಝ್ ಸುರತ್ಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ್ ಜೋಕಟ್ಟೆ, ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಕಾರ್ಪೊರೇಟರ್ ಶಂಶಾದ್ ಅಬೂಬಕ್ಕರ್, ಜಿಲ್ಲಾ ಸಮಿತಿ ಸದಸ್ಯ ನೂರುಲ್ಲಾ ಕುಳಾಯಿ, ಮಾಜಿ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಕ್ಷೇತ್ರ ಉಪಾಧ್ಯಕ್ಷ ಹಾಗೂ ಚುನಾವಣಾ ಉಸ್ತುವಾರಿ ರಿಯಾಝ್ ಅಡ್ಡೂರು ಸೇರಿದಂತೆ ಬ್ಲಾಕ್ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.